ಮಂಡ್ಯದಲ್ಲಿ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ಶಾಸಕ ಪಿ.ರವಿಕುಮಾರ್ ಗಣಿಗ ಅವರಿಗೆ ಮನವಿ ಸಲ್ಲಿಸಲಾಯಿತು. 
ಮಂಡ್ಯ

ಖಾಸಗಿ ಕಂಪನಿಯಿಂದ ವಿತರಣೆ ಚಟುವಟಿಕೆಗೆ ಆಕ್ರೋಶ: ವಿದ್ಯುತ್ ಇಲಾಖೆ ನೌಕರರ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಅನುಮತಿ ನೀಡದಂತೆ ಒತ್ತಾಯ
  • ಶಾಸಕ ರವಿಕುಮಾರ್ ಅವರಿಗೆ ಮನವಿ ಸಲ್ಲಿಕೆ
ಮಂಡ್ಯ: ಟಾಟಾ ಪವರ್ ಕಂಪನಿ ಲಿಮಿಟೆಡ್‌ನಿಂದ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆ ಚಟುವಟಿಕೆ ಪ್ರಾರಂಭಿಸಲು ಪರವಾನಗಿ ನೀಡಬಾರದೆಂದು ಆಗ್ರಹಿಸಿ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಭಾಗೀಯ ಕಚೇರಿ ಎದುರು ಜಮಾಯಿಸಿದ ನೌಕರರು, ಪ್ರತಿಭಟನೆ ನಡೆಸಿ ನಂತರ ಮೆರವಣಿಗೆ ಮೂಲಕ ಬಂದೀಗೌಡ ಬಡಾವಣೆಯಲ್ಲಿರುವ ಶಾಸಕ ರವಿಕುಮಾರ್ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಟಾಟಾ ಪವರ್ ಕಂಪನಿ ಲಿಮಿಟೆಡ್‌ನಿಂದ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆ ಚಟುವಟಿಕೆಯನ್ನು ಪ್ರಾರಂಭಿಸಲು ಪರವಾನಿಗಾಗಿ ರಾಜ್ಯದ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ. ಖಾಸಗಿ ಸಂಸ್ಥೆ ವಿದ್ಯುತ್ ವಿತರಣೆ ಕ್ಷೇತ್ರಕ್ಕೆ ಬರಲು ಬಯಸಿ ಅರ್ಜಿ ಸಲ್ಲಿಸಿರುವುದು ನಿಗಮದ ನೌಕರರು ಮತ್ತು ಗ್ರಾಹಕರಿಗೆ ಆತಂಕಕಾರಿ ವಿಷಯ ಎಂದರು.
ರಾಜ್ಯದ ಐದು ವಿದ್ಯುತ್ ವಿತರಣಾ ಕಂಪನಿ ಸಂಪೂರ್ಣ ಕರ್ನಾಟಕ ಸರ್ಕಾರದ ಸ್ವಾಮ್ಯದಲ್ಲಿದೆ. ಅದರಂತೆ ಸಾರ್ವಜನಿಕ ಹಿತಾಸಕ್ತಿ ಮತ್ತು ಸೇವಾ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಖಾಸಗಿಯವರು ವಿತರಣಾ ಜಾಲಕ್ಕೆ ಆಗಮಿಸಿದರೆ ಸರ್ಕಾರದ ನಿಯಂತ್ರಣವಿಲ್ಲದೆ ಲಾಭ ಮಾಡುವ ಏಕೈಕ ದೃಷ್ಟಿಯಿಂದ ಕಾರ್ಯಪ್ರವೃತ್ತರಾಗುತ್ತಾರೆ. ಇದಲ್ಲದೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಅಧಿಕಾರಿ/ನೌಕರರು ಹಾಗೂ ಪಿಂಚಣಿದಾರರ ಸೇವಾ ಭದ್ರತೆ, ಸಂಬಳ, ಸೌಲಭ್ಯಕ್ಕೆ ಆಪತ್ತು ಎದುರಾಗುವ ಸಂಭವ ಅಧಿಕವಾಗಿರುತ್ತದೆ. ಮಾತ್ರವಲ್ಲದೆ ಸಾರ್ವಜನಿಕರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯ, ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಸೌಲಭ್ಯಗಳಿಗೆ, ಮುಂದಿನ ದಿನಗಳಲ್ಲಿ ತೊಡಕುವುಂಟಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಜನಸಾಮಾನ್ಯರಿಗೆ ಉದ್ಯೋಗದ ಭರವಸೆಗಳಿದ್ದು, ಖಾಸಗಿ ಸಂಸ್ಥೆಗಳ ಆಗಮನದಿಂದ ಜನಸಾಮಾನ್ಯರಿಗೆ ಹಾಗೂ ನೌಕರರಿಗೆ ಯಾವುದೇ ಅನುಕೂಲಗಳು ತುಂಬಾ ಕಡಿಮೆ. ಈ ಹಿನ್ನೆಲೆಯಲ್ಲಿ ಟಾಟಾ ಕಂಪನಿಯವರ ಅರ್ಜಿಗೆ ಆಕ್ಷೇಪಣೆಯನ್ನು ಸಲ್ಲಿಸುವ ಜತೆಗೆ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಿಗೆ ಈ ವಿಚಾರವಾಗಿ ಗಮನ ಸೆಳೆಯುವ ಮೂಲಕ ಖಾಸಗಿ ಸಂಸ್ಥೆಯ ವಿರುದ್ಧ ತಾವು ಗಟ್ಟಿದನಿಯಾಗಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಉಪಲೆಕ್ಕ ನಿಯಂತ್ರಣಾಧಿಕಾರಿ ಪರಮೇಶ್, ಕಾರ್ಯನಿರ್ವಾಹಕ ಇಂಜಿನಿಯರ್ ಅನಿತಾಬಾಯಿ, ಲೆಕ್ಕಾಧಿಕಾರಿ ರವಿಚಂದ್ರನ್, ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಚ್.ಕೆ.ಅರುಣೇಶ್, ಉಪಾಧ್ಯಕ್ಷ ಮಹೇಂದ್ರ ಇತರರಿದ್ದರು.