ಪಾಂಡವಪುರ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಬೆಂಬಲಿಗರು ಅಭಿನಂದಿಸಲಾಯಿತು. ಜಿ.ಇ.ರವಿಕುಮಾರ್, ಎಚ್.ಎನ್.ಚಿಟ್ಟಿಬಾಬು, ಬಾಲರಾಜು, ಎಚ್.ಎಲ್.ರೋಜಾ, ಎಚ್.ಆರ್.ಜ್ಯೋತಿ, ಬಿ.ಪುಟ್ಟಬಸವೇಗೌಡ, ನಟರಾಜು, ಆರ್.ಪ್ರತಾಪ್, ಕಣ್ಣ ಇದ್ದರು.
ಪಾಂಡವಪುರ: ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ 2026-30ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಜಿ.ಇ.ರವಿಕುಮಾರ್ ತಂಡ ಮೇಲುಗೈ ಸಾಧಿಸಿದ್ದು, 5 ಸ್ಥಾನಗಳನ್ನು ಪಡೆದ ಎಚ್.ಎನ್.ದಯಾನಂದ ತಂಡ ಹಿನ್ನಡೆ ಅನುಭವಿಸಿತು.
ಸಂಘದ ಸಾಲಗಾರರಲ್ಲದ ಜಿ.ಇ.ರವಿಕುಮಾರ್ ತಂಡದ ಜಿ.ಇ.ರವಿಕುಮಾರ್, ಎಚ್.ಎನ್.ಚಿಟ್ಟಿಬಾಬು, ಬಾಲರಾಜು (ಸಾಮಾನ್ಯ), ಎಚ್.ಎಲ್.ರೋಜಾ, ಎಚ್.ಆರ್.ಜ್ಯೋತಿ (ಮಹಿಳಾ ಮೀಸಲು), ಬಿ.ಪುಟ್ಟಬಸವೇಗೌಡ (ಹಿಂದುಳಿದ ವರ್ಗಬಿ.), ನಟರಾಜು (ಎಸ್‌ಸಿ ಮೀಸಲು) ಹಾಗೂ ಸಾಲಗಾರರ ಕ್ಷೇತ್ರದಿಂದ, ಆರ್.ಪ್ರತಾಪ್ (ಸಾಮಾನ್ಯ), ಕಣ್ಣ (ಎಸ್‌ಟಿ ಮೀಸಲು) ಗೆಲವು ಸಾಧಿಸಿದರು.
ಅಂತೆಯೇ ಸಾಲಗಾರರಲ್ಲದ ಕ್ಷೇತ್ರದಿಂದ ಎಚ್.ಎನ್.ದಯಾನಂದ ತಂಡದ ಎಚ್.ಎನ್.ದಯಾನಂದ, ಡಿ.ಕೆ.ದೇವೇಗೌಡ (ಸಾಮಾನ್ಯ), ಸಾಲಗಾರರ ಕ್ಷೇತ್ರದಿಂದ ಎಚ್.ಎಲ್.ಮುರಳೀಧರ್, ಎ.ವೆಂಕಟೇಶ್ (ಸಾಮಾನ್ಯ), ಎಚ್.ಪಿ.ಶಿವಕುಮಾರ (ಹಿಂದುಳಿದ ವರ್ಗಬಿ) ಅವರು ಗೆಲುವು ಸಾಧಿಸಿದರು. ಉಳಿದಂತೆ ಯಾವುದೇ ತಂಡದಲ್ಲಿ ಗುರುತಿಸಿಕೊಳ್ಳದ ಜಿ.ಇ.ರಮೇಶ (ಸಾಮಾನ್ಯ) ಆಯ್ಕೆಯಾದರು.
ಪಟ್ಟಣದ ಫ್ರೆಂಚ್ ರಾಕ್ಸ್ ಶತಮಾನದ ಸರ್ಕಾರಿ ಶಾಲೆಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ 3,088 ಮತದಾರರ ಪೈಕಿ 2,774 ಮತದಾರರು ಹಕ್ಕನ್ನು ಚಲಾಯಿಸಿದರು. ಅದರಲ್ಲಿ 113 ಮತಗಳು ತಿರಸ್ಕೃತಗೊಂಡವು. ಸಾಲಗಾರರ ಕ್ಷೇತ್ರದಿಂದ 371 ಮತದಾರ ಪೈಕಿ 360 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅದರಲ್ಲಿ 6 ಮತಗಳು ತಿರಸ್ಕೃತಗೊಂಡವು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ವಸೀಂ ಪಾಷಾ ಕಾರ್ಯನಿರ್ವಹಿಸಿದರು.
ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮುಖಂಡರ ಜತೆಗೆ ಕಾಂಗ್ರೆಸ್ ರೈತ ಸಂಘದ ಮುಖಂಡರು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರು. ಪ್ರಮುಖವಾಗಿ ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್, ಜೆಡಿಎಸ್ ಮುಖಂಡರಾದ ಜಿ.ಇ.ರವಿಕುಮಾರ್, ಬಿ.ಎಸ್.ಜಯರಾಮು, ಕೆ.ವಿ.ರಘು, ,ಪುಟ್ಟಬಸವೇಗೌಡ, ಎಚ್.ಎಲ್.ರೋಜಾ, ಎಚ್.ಆರ್.ಜ್ಯೋತಿ, ಕಾಂಗ್ರೆಸ್ ಮುಖಂಡರಾದ ಬಾಲರಾಜು, ಆರ್.ಪ್ರತಾಪ್, ನಟರಾಜು, ತಮ್ಮೇಗೌಡ, ರೈತ ಸಂಘದ ಮುಖಂಡರಾದ ಎಚ್.ಶಿವರಾಮು, ಎಚ್.ಎನ್.ಚಿಟ್ಟಿಬಾಬು, ಬಿಜೆಪಿ ಮುಖಂಡ ಎನ್.ಭಾಸ್ಕರ್ ಮೈತ್ರಿಯೊಂದಿಗೆ ಸ್ಪರ್ಧೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.