ಮದ್ದೂರು ತಾಲೂಕು ಕಬ್ಬಾರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲವು ಸಾಧಿಸಿದ ನೂತನ ನಿರ್ದೇಶಕರನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಭಿನಂದಿಸಿದರು. ಮಾದನಾಯಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್, ನಟರಾಜು, ಕುಮಾರ್, ಕೆ.ಎಲ್ ರವಿ ಇದ್ದರು.
ತಾಲೂಕಿನ ಕಬ್ಬಾರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ವಿಜಯ ಸಾಧಿಸಿರುವುದು ಸಂತಸದ ಸಂಗತಿ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಅವರು, ಈ ಗೆಲುವು ಪಕ್ಷದ ತತ್ವ-ಸಿದ್ಧಾಂತಗಳ ಮೇಲಿನ ಜನರ ವಿಶ್ವಾಸ ಹಾಗೂ ಕಾರ್ಯಕರ್ತರ ಪರಿಶ್ರಮಕ್ಕೆ ಸಂದ ಗೌರವವಾಗಿದೆ. ನೂತನ ನಿರ್ದೇಶಕರೆಲ್ಲರೂ ರೈತರ ಹಾಗೂ ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಕಾಪಾಡುತ್ತಾ ಸಹಕಾರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಸಂಘವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದರು.
ಮುಂದಿನ ದಿನಗಳಲ್ಲಿ ನಗರಸಭೆ, ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರುತ್ತಿರುವುದರಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವಂತೆ ಕಾರ್ಯತಂತ್ರ ರೂಪಿಸಬೇಕೆಂದು ತಿಳಿಸಿದರು.
ನೂತನ ನಿರ್ದೇಶಕರಾಗಿ ಆಯ್ಕೆಯಾದ ರವಿಕುಮಾರ್, ಕೆ.ಎಲ್.ಪುಟ್ಟಲಿಂಗಯ್ಯ, ಕೆ.ಎನ್ ಶಿವಲಿಂಗಯ್ಯ, ಕೆ.ಶಶಿಕಲಾ, ಶಶಿಕಲಾ, ಉಮೇಶ್, ಕೃಷ್ಣ, ಚಿಕ್ಕೈದ ಹೆಗಡೆ, ಶಿವ ಬೋರಯ್ಯ, ಸಿದ್ದಯ್ಯ, ಬೋರೇಗೌಡ ಅವರನ್ನು ಅಭಿನಂದಿಸಲಾಯಿತು. ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್, ನಟರಾಜು, ಕುಮಾರ್, ಗ್ರಾಮದ ಮುಖಂಡರಾದ ಕೆ.ಎಲ್.ರವಿ, ಅಪ್ಪಿಗೌಡ, ಪುಟ್ಟಲಿಂಗಯ್ಯ, ಮನು ಕುಮಾರ್, ಪುಟ್ಟಸ್ವಾಮಿ, ಎಚ್.ರಾಜು, ಪ್ರಸನ್ನ ಇತರರು ಇದ್ದರು.