ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಬೋರ್‌ವೆಲ್ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ವಾಸುದೇವ್, ಸಿ.ಎಸ್.ಪುಟ್ಟರಾಜು, ಸಿ.ಶಿವಕುಮಾರ್ ಇತರರು ಇದ್ದರು. 
ಮಂಡ್ಯ

ಬೋರ್‌ವೆಲ್ ದುರಸ್ತಿಗಾರರಿಗೆ ಸೌಲಭ್ಯ ಕಲ್ಪಿಸಲು ಶ್ರಮ

ನಾಗೇಶ ಎಸ್
ಪಾಂಡವಪುರ: ಬೋರ್‌ವೆಲ್ ದುರಸ್ತಿಗಾರರನ್ನು ಅಸಂಘಟಿತ ವಲಯ ಎಂದು ಘೋಷಿಸಿ, ಸೌಲಭ್ಯಗಳನ್ನು ದೊರಕಿಸಿಕೊಡಲು ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಮಹದೇಶ್ವರಪುರ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಪಾಂಡವಪುರ ತಾಲೂಕು ಬೋರ್‌ವೆಲ್ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬೋರ್‌ವೆಲ್ ದುರಸ್ತಿಗಾರರ ಕೆಲಸವು ಶ್ರಮವುಳ್ಳದ್ದಾಗಿದೆ. ಭೂಮಿಗೂ ರೈತರಿಗೆ ಅವಿನಾಭಾವ ಸಂಬಂಧವಿದ್ದಂತೆ, ಬೋರ್‌ವೆಲ್ ದುರಸ್ತಿಗಾರರಿಗೂ ಭೂಮಿಗೆ ಸಂಬಂಧವಿದೆ. ರೈತ ಸಮುದಾಯದ ಹಿತ ಬಯಸುವ ಕಾಯಕವಾಗಿದೆ. ಶ್ರಮಜೀವಿಗಳಾದವರಿಗೆ ಕಾರ್ಮಿಕ ಇಲಾಖೆಯಿಂದ ದೊರೆಯುವ ವಿಮೆ, ವೇತನ ಸೇರಿದಂತೆ ಇನ್ನಿತರ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನ ಮಾಡಲಾಗುವುದು, ಆರ್‌ಟಿಒ ಅಧಿಕಾರಿಗಳು ಬೋರ್‌ವೆಲ್ ವಾಹನಗಳಿಗೆ ಹೇರಿರುವ ನಿಬಂಧನೆ ಸಡಿಲಗೊಳಿಸುವ ಸಂಬಂಧ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ವಾಸುದೇವ್ ಮಾತನಾಡಿ, ರಾಜ್ಯದಲ್ಲಿ ಅನೇಕ ಅಸಂಘಟಿತ ವಲಯದ ದುಡಿಮೆಗಾರರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಶೇ.5ರಷ್ಟು ಮಾತ್ರ ಅಸಂಘಟಿತ ವಲಯ ಎಂದು ಗುರುತಿಸಲಾಗಿದೆ. ಉಳಿದವರೆಲ್ಲನ್ನು ಅಸಂಘಟಿತ ವಲಯ ಎಂದು ಘೋಷಿಸಿ ಅವರಿಗೆ ಕಾರ್ಮಿಕ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಬೇಕಿದೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಶಿಕ್ಷಕ ನಂದೀಶ್, ಬೋರ್‌ವೆಲ್ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವಸಂತ್ ಕುಮಾರ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಕೆಂಪೇಗೌಡ, ಖಜಾಂಚಿ ಪ್ರಭಾಕರ, ಪದಾಧಿಕಾರಿಗಳಾದ ಅಶೋಕ, ನಾಗರಾಜ್, ಚಲುವರಾಜು, ಹರೀಶ್, ಕುಮಾರ, ಮಂಜುನಾಥ್, ಶಂಕರ್, ದಿನೇಶ್, ರೇವಣ್ಣ, ಶಿವಣ್ಣ ಹಾಗೂ ಸಂಘದ ಇದ್ದರು.