ಯಡಗನಹಳ್ಳಿಯಲ್ಲಿ 5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯ ವೇದಿಕೆ ಕಾರ್ಯಕ್ರಮವನ್ನು ಶಾಸಕ ಕದಲೂರು ಉದಯ್ ಉದ್ಘಾಟಿಸಿದರು. ಬಿ.ಬಸವರಾಜು, ಎ.ಎಸ್. ರಾಜೀವ್, ಗೋಪನಹಳ್ಳಿ ಕೆಂಪರಾಜು, ಕೆಂಚೇಗೌಡ, ರೈಸ್ ಮಿಲ್ ಪುಟ್ಟೇಗೌಡ ಇತರರಿದ್ದರು.
ಕೆ.ಎಂ.ದೊಡ್ಡಿ: ಜನರ ಸಹಕಾರವಿದ್ದರೆ ಮಾತ್ರ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು, ನನ್ನ ಬಗ್ಗೆ ಯಾರು ಏನು ಮಾತನಾಡಿದರೂ ನಾನು ಅದಕ್ಕೆ ಕಿವಿಗೊಡದೆ ಕ್ಷೆತ್ರದ ಅಭಿವೃದ್ಧಿಯತ್ತ ನನ್ನ ಚಿತ್ತ ಹರಿಸಿದ್ದೇನೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಯಡಗನಹಳ್ಳಿಯಲ್ಲಿ 5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ವಿರುದ್ಧ ಟೀಕೆಗಳಿಗೆ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಉತ್ತರ ನೀಡಲಿವೆ ಎಂದರು.
20 ವರ್ಷಗಳಿಂದ ರಸ್ತೆ ಅಧ್ವಾನಗೊಂಡು ಸಾರ್ವಜನಿಕರು ಓಡಾಡಲು ಪ್ರಯಾಸ ಪಡುತ್ತಿದ್ದರು. ಈ ರಸ್ತೆಯನ್ನು ಸುಮಾರು 5 ಕಿ.ಮೀ.ವರೆಗೂ ದ್ವಿಪಥ ರಸ್ತೆಯಾಗಿ ಮಾಡಿ ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಅನೂಕುಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಭಾಗಶಃ ಎಲ್ಲ ಹಳ್ಳಿಗಳ ರಸ್ತೆಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು ನಿರಂತರವಾಗಿ ಕ್ಷೇತ್ರದ ಒಳಿತಿಗಾಗಿ ಹಗಲಿರಳು ಶ್ರಮಿಸುತ್ತಿದ್ದು, ಮದ್ದೂರು ಕ್ಷೇತ್ರವನ್ನು ಮಾದರಿ ಮಾಡಲು ಪಣ ತೊಟ್ಟಿದ್ದು, ಇದಕ್ಕೆ ಕ್ಷೇತ್ರದ ಕ್ಷೇತ್ರದ ಜನರ ಸಹಕಾರ ಅತ್ಯಗತ್ಯ ಎಂದರು.
ಚುನಾವಣೆಯ ಸಂದರ್ಭಗಳಲ್ಲಿ ರಾಜಕೀಯ ಮಾಡಬೇಕೆ ಹೊರತು ಅಭಿವೃದ್ಧಿ ವಿಚಾರ ಬಂದಾಗ ಒಗ್ಗಟ್ಟು ಪ್ರದರ್ಶಿಸಬೇಕು. ಅಭಿವೃದ್ಧಿಗೆ ಅಡ್ಡಿ ಮಾಡಬಾರದು. ಯಾವುದೇ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ. ಅದನ್ನು ಪರಸ್ಪರ ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ ಎಂದು ತಿಳಿಸಿದರು.
ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಹಿಂದೆಂದೂ ತಂದಿರದಂತಹ, ಕಂಡು ಕೇಳರಿಯದಷ್ಟು ಅನುದಾನ ತಂದು ನೀರಾವರಿ, ರಸ್ತೆ, ಕೃಷಿ ಜಮೀನುಗಳ ರಸ್ತೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಕ್ಷೇತ್ರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಸಂಬಂಧ ಪಟ್ಟ ಇಲಾಖೆ ಸಚಿವರ ಬೆನ್ನು ಬಿದ್ದು ಅನುದಾನಗಳನ್ನು ತರುತಿದ್ದರೂ ಕ್ಷೇತ್ರಕ್ಕೆ ಮತ್ತಷ್ಟು ಅನುದಾನಗಳ ಅವಶ್ಯಕತೆ ಇದೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಸಕಾರಾತ್ಮವಾಗಿ ಭರವಸೆ ನೀಡಿದ್ದಾರೆ ಎಂದರು.
ಸಮಾಜ ಸೇವೆಗೆ ಬಂದ ನನ್ನನ್ನು ಜನರು ಹರಸಿ ಆಶೀರ್ವದಿಸಿ ವಿಧಾನಸೌಧಕ್ಕೆ ಕಳುಹಿಸಿದ್ದೀರಿ, ನಿಮ್ಮ ನಂಬಿಕೆ ಹುಸಿಗೊಳಿಸದೆ ಅಭಿವೃದ್ಧಿಯೊಂದೆ ಮಂತ್ರ ಎಂಬಂತೆ ನಿರಂತರವಾಗಿ ಸಾರ್ವಜನಿಕರ ಒಡನಾಟ ಇಟ್ಟುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಭಾವುಕರಾದರು.
ನೀರಾವರಿ ಇಲಾಖೆಗೆ ಸಂಬಂಧಪಟ್ಟಂತೆ ಎಲ್ಲೂ ಕಳಪೆ ಕಾಮಗಾರಿ ನಡೆಯದಂತೆ ನಾನೇ ಖುದ್ದಾಗಿ ನಿಂತು ನಾಲೆಗಳ ಕೆಲಸಗಳನ್ನು ವೀಕ್ಷಿಸುತ್ತಿದ್ದೇನೆ. ಇನ್ನೂ ಕೆಲವೇ ತಿಂಗಳಲ್ಲಿ ಎಲ್ಲ ಜಮೀನುಗಳಿಗೆ ನೀರು ಸಮರ್ಪಕವಾಗಿ ಹರಿಯಲಿದೆ. ಇನ್ನೂ 50 ವರ್ಷ ರೈತರು ಯಾವುದೇ ತೊಂದರೆ ಅನುಭವಿಸುವ ಅಗತ್ಯವಿಲ್ಲ ಎಂದರು.
ಮದ್ದೂರು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಿ.ಬಸವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಗೋಪನಹಳ್ಳಿ ಕೆಂಪರಾಜು, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆಂಚೇಗೌಡ, ಮುಖಂಡರಾದ ರೈಸ್ ಮಿಲ್ ಪುಟ್ಟೇಗೌಡ, ಚನ್ನಬಸವೇಗೌಡ, ರವಿ, ರಮೇಶ್, ವೈ.ಸಿ.ರಾಜು, ಶಂಕರ್, ಅರುಣ್, ಚಂದ್ರು, ಮಹೇಶ, ದೊರೆಸ್ವಾಮಿ ಸೇರಿದಂತೆ ಮತ್ತಿತರಿದ್ದರು.