ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಶತಮಾನೋತ್ಸವ ಆಚರಿಸಿಕೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡಗಳ ಉದ್ಘಾಟನಾ ಸಮಾಂರಂಭವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಎನ್.ಎಂ.ಪ್ರಕಾಶ್, ನಾರಾಯಣಸ್ವಾಮಿ, ಧನಂಜಯ, ರಾಜೇಶ್ವರಿ, ಜ್ಞಾನೇಶ್, ನಾಗಪ್ಪ ಇತರರಿದ್ದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಲವು ಅನುಕೂಲಗಳನ್ನು ಕಲ್ಪಿಸಲಾಗಿದ್ದು, ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಸೋಮವಾರ ಶತಮಾನೋತ್ಸವ ಆಚರಿಸಿಕೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳ ಜತೆಗೆ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಕ ಕೊಡಿಸಿ ಅವರ ಜೀವನ ಉತ್ತಮಗೊಳಿಸುವುದು ನನ್ನ ಮುಖ್ಯ ಧ್ಯೇಯವಾಗಿದೆ ಎಂದರು.
ಶಾಸಕನಾದ ನಂತರ ಶತಮಾನೋತ್ಸವ ಶಾಲೆಗೆ ಕಾಯಕಲ್ಪ ಕೊಡಿಸಬೇಕು ಎಂಬ ಉದ್ದೇಶದಿಂದ ಅಂದಿನ ಶಿಕ್ಷಣ ಸಚಿವರ ಗಮನಕ್ಕೆ ತಂದಾಗ, ಅವರೇ ಖುದ್ದು ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಊಟ ಸವಿದು ಶಾಲೆಯ ಸಮಸ್ಯೆಗಳನ್ನು ಪರಿಶೀಲನೆ ಮಾಡಿದ್ದರು. ನಂತರ ಶೀಘ್ರವಾಗಿ ಶಾಲೆಗೆ 5 ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಿಂತ ದೊಡ್ಡ ಆಸ್ತಿ ಯಾವುದೂ ಇಲ್ಲ ಎಂಬುದನ್ನು ಅರಿತು, ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಉನ್ನತ ಸ್ಥಾನಮಾನಗಳನ್ನು ಪಡೆದು ಪಾಲಕರಿಗೆ, ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್ ಮಾತನಾಡಿ, ಶತಮಾನದ ಶಾಲೆಯ ಕಟ್ಟಡಗಳು ಶಿಥಿಲಗೊಂಡು ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ತೊಂದರೆಯಾಗಿತ್ತು. ಸಂಬಂಧಿಸಿದವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಆದರೆ, ಶಾಸಕ ಕೆ.ಎಂ.ಉದಯ್ ಅವರ ಗಮನಕ್ಕೆ ತಂದಾಗ ಶತಮಾನದ ಶಾಲೆಗೆ ಕಾಯಕಲ್ಪ ನೀಡಿರುವುದು ಪ್ರಶಂಸನೀಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು, ಬಿಇಒ ಧನಂಜಯ, ಅಕ್ಷರ ದಾಸೋಹ ತಾಲೂಕು ಸಹಾಯಕ ನಿರ್ದೇಶಕಿ ರಾಜೇಶ್ವರಿ, ಉದ್ಯಮಿ ನಾರಾಯಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಪಿಡಿಒ ಶೀಲಾ, ಮುಖ್ಯ ಶಿಕ್ಷಕರಾದ ನಾಗಪ್ಪ, ಸುಧಾ, ಡಾ.ನರಸಿಂಹಮೂರ್ತಿ, ಸಂಪನ್ಮೂಲ ವ್ಯಕ್ತಿ ಜ್ಞಾನೇಶ್, ಮುಖಂಡರಾದ ಸುರೇಶ್, ಶಂಕರ್, ಸ್ವಾಮಿ, ರಾಜಣ್ಣ, ರಾಜಣ್ಣ, ದೊರೆಸ್ವಾಮಿ, ನಾರಾಯಣ್, ತಮ್ಮಣ್ಣ, ಮಹೇಶ್, ಕದಲೂರು ಬಸವರಾಜು, ಚಿಕ್ಕಣ್ಣ, ಭೀಮಣ್ಣ, ಕೆ.ಎಂ.ರವಿ, ಖುದ್ದುಸ್, ನಾಗರಾಜು, ಪುಟ್ಟಸ್ವಾಮಿ ಇದ್ದರು.