ಬೆಸಗರಹಳ್ಳಿಯ ಮಾನಸ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಮಾನಸೋತ್ಸವ ಕಾರ್ಯಕ್ರಮದಲ್ಲಿ ನಾ.ಸೋಮೇಶ್ವರ್ ಅವರಿಗೆ ಡಿ.ಕರಡಿಗೌಡ ವೈದ್ಯ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಡಾ.ಎಂ ಕೃಷ್ಣೇಗೌಡ ಅವರಿಗೆ ಡಿ.ಕರಡಿಗೌಡ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ನಿಶ್ಚಲಾನಂದನಾಥಸ್ವಾಮೀಜಿ, ವಿ.ಕೆ.ಜಗದೀಶ್, ಪ್ರಕಾಶ್‌ಗೌಡ, ಡಾ.ಗುಬ್ಬಿಗೂಡು ರಮೇಶ್, ಧನಂಜಯ ನಾಗರಾಜು, ಪ್ರವೀಣ್‌ಕುಮಾರ್ ಇದ್ದರು.
- ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ
- ಮಾನಸೋತ್ಸವ-2026
ಮದ್ದೂರು: ಪ್ರಪಂಚದಲ್ಲಿ ವಿದ್ಯೆಗೆ ಮಹತ್ತರ ಸ್ಥಾನವಿದ್ದು, ಇದನ್ನರಿತು ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಪಾಲಕರಿಗೆ, ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬೆಸಗರಹಳ್ಳಿಯ ಮಾನಸ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಮಾನಸೋತ್ಸವ-2026, ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡಿಗೌಡ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಆಗಾಧವಾದ ಪ್ರತಿಭೆಯಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿ ಗಮನ ಸೆಳೆದಿರುವ ಹಲವಾರು ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಮಾನಸ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಮಾನಸ ಸಮೂಹ ಸಂಸ್ಥೆಯು ಬೆಳೆದು ಹೆಸರು ಮಾಡಿರುವುದರ ಹಿಂದೆ ಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಅವರ ಪರಿಶ್ರಮವಿದ್ದು, ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಹಲವಾರು ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಂಡಿರುವುದು ಸಂತಸದ ವಿಷಯವೆಂದರು.
ಶಿಕ್ಷಣ ಸಂಸ್ಥೆಗಳು ವಿದ್ಯೆಯನ್ನು ಕಲಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಕಲಿಸುವ ದೀವಿಗೆಯಾಗಬೇಕು ಆ ನಿಟ್ಟಿನಲ್ಲಿ ಮಾನಸ ಸಂಸ್ಥೆಯು ನಿಲ್ಲುತ್ತದೆ ಎಂದರು.
ಭಾರತ ದೇಶವು ವಿಶ್ವವೇ ನೋಡುವ ಮಟ್ಟಿಗೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದು, ಬಾಹ್ಯಾಕಾಶ, ಕ್ರೀಡೆ, ವಿಜ್ಞಾನ, ಕೃಷಿ, ತಂತ್ರಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದೇಶದ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭೆಗಳ ಮೂಲಕ ಜಗತ್ತಿನ ಗಮನ ಸೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವುದರ ಮೂಲಕ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಕೃತಿ ಚಿಂತಕ ನಾ.ಸೋಮೇಶ್ವರ್ ಅವರಿಗೆ ಸ್ವಾತಂತ್ರ್ಯ ಹೋರಾಟಗಾರ ದಿ.ಕರಡಿಗೌಡ ವೈದ್ಯ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಪ್ರಸಿದ್ಧ ವಾಗ್ಮಿ ಡಾ.ಎಂ ಕೃಷ್ಣೇಗೌಡ ಅವರಿಗೆ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೀರ್ತಿ ಶೇಷ ಪುಟ್ಟತಾಯಮ್ಮ ಕೆಂಚೇಗೌಡ (ವಳಗೆರೆಹಳ್ಳಿ) ಸ್ಮರಣಾರ್ಥ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಯಿತು. ಸಿ.ತಿಮ್ಮಯ್ಯ ಸ್ಮರಣಾರ್ಥ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು. ಪೊಲೀಸ್ ಉಪ ಮಹಾ ನಿರೀಕ್ಷಕ ಪ್ರಕಾಶ್‌ಗೌಡ, ಖ್ಯಾತ ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್, ಬಿಇಒ ಧನಂಜಯ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿ.ಕೆ.ಜಗದೀಶ್, ಕಾರ್ಯದರ್ಶಿ ನಾಗರಾಜು, ಪ್ರಾಂಶುಪಾಲ ಪಿ.ಸಿ.ಪ್ರವೀಣ್ ಕುಮಾರ್ ಇತರರಿದ್ದರು.