ಮಂಡ್ಯ ನಗರದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆನಂದ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
- ನಂಜಮ್ಮ ಮೋಟೇಗೌಡ ಚಾರಿಟಬಲ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಕೊಪ್ಪ ವತಿಯಿಂದ ಆಯೋಜನೆ
ಸ್ವಾತಂತ್ರ್ಯ ನಂತರ ನಡೆದ ಶೈಕ್ಷಣಿಕ ಚಳವಳಿಯಲ್ಲಿ ಸರ್ಕಾರದ ಜತೆಗೆ ನೂರಾರು ಶಿಕ್ಷಣ ಸಂಸ್ಥೆಗಳು ತಮ್ಮ ಕಟಿಬದ್ಧತೆಯನ್ನು ಪ್ರದರ್ಶನ ಮಾಡಿವೆ. ಇಲ್ಲದಿದ್ದರೆ ಸಾಕ್ಷರತೆ ಈ ಪ್ರಮಾಣದಲ್ಲಿ ಇರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರ ಒಂದರಿಂದಲೇ ಶೈಕ್ಷಣಿಕ ಚಳವಳಿಯನ್ನು ಸಮರ್ಥವಾಗಿ ರೂಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಕೊಪ್ಪ ವತಿಯಿಂದ ಆಯೋಜಿಸಿದ್ದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ನಂತರ ಶೈಕ್ಷಣಿಕ ಚಳವಳಿಯನ್ನು ಸಮರ್ಥವಾಗಿ ರೂಪಿಸುವ ಮೂಲಕ ಜ್ಞಾನಾರ್ಜನೆಗೆ ಕಾರಣವಾಯಿತು. ಪರಿಣಾಮ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ನೆರವಾಯಿತು ಎಂದರು.
ನಿತ್ಯಸಚಿವ ಕೆ.ವಿ.ಶಂಕರಗೌಡರು ಪ್ರಾರಂಭ ಮಾಡಿದ ಜನತಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ದಾರಿಯಾಯಿತು. ಅದೇ ರೀತಿ ಶ್ರೀರಂಗಪಟ್ಟಣ ತಾಲೂಕು ಮಹದೇವಪುರದಲ್ಲಿರುವ ಆನಂದ ಶಿಕ್ಷಣ ಸಂಸ್ಥೆ ಬೆಳೆದು ಬಂದ ಇತಿಹಾಸ ಅತ್ಯಂತ ರೋಚಕತೆಯಿಂದ ಕೂಡಿದೆ. ಜತೆಗೆ ವಿದ್ಯಾರ್ಥಿಗಳ ಜ್ಞಾನ ದಾಸೋಹ ನೀಡಿದೆ. ಇಂತಹ ಸಂಸ್ಥೆಗೆ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಕೆ.ವಿ.ಶಂಕರಗೌಡರು ನಮ್ಮನ್ನಗಲಿ ಹಲವು ವರ್ಷ ಕಳೆದರೂ ಇನ್ನೂ ನೆನಪಿಸಿಕೊಳ್ಳುತ್ತೇವೆ ಎಂದರೆ ಅವರ ಕಾರ್ಯವೈಖರಿ, ಜನಸೇವೆ ಹೇಗಿತ್ತು ಎನ್ನುವುದನ್ನು ತಿಳಿಯಬೇಕು. ಹಾಗಾಗಿ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ವ್ಯಕ್ತಿಗಳು ಮತ್ತು ಸಾಧಕರನ್ನು ಗುರುತಿಸಿ ಅಭಿನಂದಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಆನಂದ ಶಿಕ್ಷಣ ಸಂಸ್ಥೆಯಲ್ಲಿ 650 ಮಕ್ಕಳು ಓದುತ್ತಿದ್ದಾರೆ ಎಂದರೆ ಅಲ್ಲಿನ ಶಿಕ್ಷಣದ ಗುಣಮಟ್ಟದ ಬಗ್ಗೆ ತಿಳಿಯುತ್ತದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಎಂ.ಶ್ರೀನಿವಾಸ್, ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು, ಅಲಯನ್ಸ್ ಸಂಸ್ಥೆಯ ನಾಗರಾಜು ವಿ.ಭೈರಿ, ಆನಂದ ಶಿಕ್ಷಣ ಸಂಸ್ಥೆಯ ಖಜಾಂಚಿ ಎಂ.ಪಿ.ಸ್ವಾಮಿಗೌಡ ಭಾಗವಹಿಸಿದ್ದರು. ಇದೇ ವೇಳೆ ನಿತ್ಯ ಸಚಿವ ಕೆ.ವಿ.ಶಂಕರಗೌಡ ಶಿಕ್ಷಣ ಪ್ರಶಸ್ತಿಯನ್ನು ಮಹದೇವಪುರ ಆನಂದ ಶಿಕ್ಷಣ ಸಂಸ್ಥೆಯ ಪರವಾಗಿ ಸ್ವೀಕರಿಸಿದ ಅಧ್ಯಕ್ಷ ಗಿಣಿಸ್ವಾಮಿ ಸ್ವೀಕರಿಸಿದರು.