ಮದ್ದೂರು ತಾಲೂಕಿನ ನಿಡಘಟ್ಟ ಗಡಿಗ್ರಾಮದ ಹೊರವಲಯದಲ್ಲಿರುವ ಬೆಳಕೆರೆ ಗ್ರಾಮದ ಸಂಪೂರ್ಣ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ ವಿದ್ಯಾವೈಭವ-2026 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ಚನ್ನಪಟ್ಟಣ ತಹಸೀಲ್ದಾರ್ ಗಿರೀಶ್ ವಿತರಿಸಿದರು. ಡಾ.ಬಿ.ಎಸ್.ಎಂ.ನಾಯ್ಡು, ಡಾ.ಸಂಪೂರ್ಣಾ ನಾಯ್ಡು, ಡಾ.ಪದ್ಮಾಶೇಖರ್ ಇದ್ದರು. 
ಮಂಡ್ಯ

ವಿದ್ಯಾವಂತರೇ ಸಮಾಜಘಾತಕ ಕೃತ್ಯಗಳಲ್ಲಿ ಭಾಗಿ

ಪ್ರಮುಖ ಮುಖ್ಯಾಂಶಗಳು

  • ಚನ್ನಪಟ್ಟಣ ತಹಸೀಲ್ದಾರ್ ಗಿರೀಶ್ ಬೇಸರ
  • ವಿದ್ಯಾವೈಭವ-2026 ಪ್ರಶಸ್ತಿ ಪ್ರದಾನ ಸಮಾರಂಭ
ಮದ್ದೂರು: ಅತ್ತ್ಯುನ್ನತ ಶಿಕ್ಷಣ ಪಡೆದ ವಿದ್ಯಾವಂತರೇ ಹಲವರು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಆತಂಕಕಾರಿ ಎಂದು ಚನ್ನಪಟ್ಟಣ ತಹಸೀಲ್ದಾರ್ ಗಿರೀಶ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ನಿಡಘಟ್ಟ ಗಡಿಗ್ರಾಮದ ಹೊರವಲಯದಲ್ಲಿರುವ ಬೆಳಕೆರೆ ಗ್ರಾಮದ ಸಂಪೂರ್ಣ ವಿದ್ಯಾಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾವೈಭವ-2026 ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಪಡೆದ ಹಲವಾರು ವ್ಯಕ್ತಿಗಳು ಇಂದು ಹಲವಾರು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜಕ್ಕೆ ಮಾರಕವಾಗಿದ್ದು ಇತ್ತೀಚಿನ ದಿನಗಳಲ್ಲಿ ತಂದೆ, ತಾಯಿಗಳ ಬಗ್ಗೆ ಮಾನವೀಯತೆಯಿಲ್ಲದೆ ಉನ್ನತ ಶಿಕ್ಷಣ ಪಡೆದ ಮಕ್ಕಳೇ ವೃದ್ಧಾಶ್ರಮಗಳಿಗೆ ತಮ್ಮ ಪಾಲಕರನ್ನು ಸೇರಿಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ತಂದೆ, ತಾಯಿ ಕಷ್ಟಪಟ್ಟು ಮತ್ತು ಸಾಲ ಮಾಡಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಇಂಜಿನಿಯರ್, ವೈದ್ಯರು, ಪೊಲೀಸ್ ಇನ್ನಿತರ ಹುದ್ದೆಗಳನ್ನು ಅಲಂಕರಿಸಿ ವಿದೇಶಕ್ಕೆ ತೆರಳಿದ ಬಳಿಕ ಗ್ರಾಮೀಣ ಸೊಗಡು ಮತ್ತು ಸಂಸ್ಕೃತಿಯನ್ನು ಮರೆಯುವ ಜತೆಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ತಂದೆ, ತಾಯಿಯನ್ನೇ ದೂರ ಮಾಡುತ್ತಿರುವ ಪ್ರಕರಣಗಳು ದಿನನಿತ್ಯ ಜರುಗುತ್ತಿವೆ ಎಂದರು.
ಪ್ರತಿಯೊಬ್ಬರೂ ದೇಶಾಭಿಮಾನ, ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆ ಹೊರತು ಹಲವಾರು ದುಷ್ಕೃತ್ಯಗಳ ಮೂಲಕ ತಮ್ಮ ಬದುಕನ್ನು ಕಂಡುಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲವೆಂದ ಅವರು, ಸಮಾಜಕ್ಕೆ ಮಾದರಿಯಾಗುವಂತಹ ಸೇವೆಗಳನ್ನು ಕೈಗೊಂಡು ತಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬೇಕೆಂದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಕೆ.ಲೋಕನಾಥ್ ಮಾತನಾಡಿ ಪದವಿ ಪಡೆದ ವಿದ್ಯಾರ್ಥಿಗಳು ಮುಂದಿನ ಮಹತ್ತರ ಘಟ್ಟವನ್ನು ತಲುಪಲು ಉನ್ನತ ಉದ್ಯೋಗವನ್ನು ಪಡೆದುಕೊಂಡು ಶಿಕ್ಷಣ ಕೊಡಿಸಿದ ತಂದೆ, ತಾಯಿಗಳಿಗೆ ಋಣಿಯಾಗಿರಬೇಕೆಂದು ಕಿವಿಮಾತು ಹೇಳಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಪೈಪೋಟಿಯಿದ್ದು ಯಾವುದೇ ಅಂಜಿಕೆಗೆ ಒಳಗಾಗದೆ ಧೈರ್ಯವಾಗಿ ಐಎಎಸ್, ಐಪಿಎಸ್, ಕೆಪಿಎಸ್ ಪೂರೈಸಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಕಾಲೇಜಿಗೆ ಮತ್ತು ಪಾಲಕರಿಗೆ ಕೀರ್ತಿ ತರಬೇಕೆಂದರು.
ಪದವಿ ಶಿಕ್ಷಣ ಮುಗಿಸಿ ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ಗಿರೀಶ್ ಪ್ರಶಸ್ತಿ ಪ್ರದಾನ ಮಾಡಿದರು. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪಾಲಕರ ಗಮನ ಸೆಳೆದರು.
ಸಂಪೂರ್ಣ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್.ಎಂ.ನಾಯ್ಡು, ಉಪಾಧ್ಯಕ್ಷರಾದ ಡಾ.ಸಂಪೂರ್ಣ ನಾಯ್ಡು, ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಪದ್ಮಶೇಖರ್ ಇತರರು ಇದ್ದರು.