ಮಂಡ್ಯ ನಗರದಲ್ಲಿ ತಂಬಾಕು ಮುಕ್ತ ಯುವ ಅಭಿಯಾನಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಚಾಲನೆ ನೀಡಿದರು. ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಆಶಾ, ಕೋಮಲ್ ಕುಮಾರ್, ತಿಮ್ಮರಾಜು, ಬಿ.ಎಸ್.ಅನುಪಮಾ ಇತರರಿದ್ದರು.
- Drug-free India campaign
- Tobacco-free youth campaign
- Awareness against drugs
ಮಂಡ್ಯ: ಯುವ ಜನತೆ ಭಾರತದ ಆಸ್ತಿ. ಆದ್ದರಿಂದ ಡ್ರಗ್ಸ್ ಮತ್ತು ಗಾಂಜಾ ದುಶ್ಚಟಕ್ಕೆ ಯುವ ಜನತೆ ಒಳಗಾಗದೆ ದೇಶವನ್ನು ನಶಾ ಮುಕ್ತವನ್ನಾಗಿಸಲು ಕೈಜೋಡಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಶಾಮುಕ್ತ ಭಾರತ ಅಭಿಯಾನ ಯೋಜನೆಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜಾಥಾ ಹಾಗೂ ತಂಬಾಕು ಮುಕ್ತ ಯುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾರ್ಷಿಕೋತ್ಸವದ ಆಚರಣೆಗಿಂತಲೂ ದೇಶವನ್ನು ನಶಾ ಮುಕ್ತಗೊಳಿಸುವಲ್ಲಿ ಸಮಾಜದ ಪಾತ್ರ ಬಹಳ ಮುಖ್ಯ. ದೇಶವನ್ನು ನಶಾ ಮುಕ್ತಗೊಳಿಸುವಲ್ಲಿ ಯುವ ಜನತೆ ಸಂಕಲ್ಪ ಮಾಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ದೇಶದಲ್ಲಿ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಗಾಂಜಾ ಮತ್ತು ಡ್ರಗ್ಸ್ ಸೇವನೆಯಿಂದ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು ಹೀಗೆ ಅನೇಕ ವರ್ಗದವರನ್ನು ಹೊರತರುವಲ್ಲಿ ಸಮಾಜ ಪಣತೊಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಗಾಂಜಾ ಹಳ್ಳಿಗಳಿಗೂ ಹರಡಿದೆ. ಪ್ರತಿಯೊಬ್ಬರಿಗೂ ದುಶ್ಚಟಗಳ ದುಷ್ಪರಿಣಾಮದ ಅರಿವು ಮತ್ತು ಜಾಗೃತಿ ಬಹಳ ಮುಖ್ಯ. ದುಶ್ಚಟಕ್ಕೆ ಒಳಗಾದವರು ಯಾವ ರೀತಿಯಲ್ಲಿ ತಮ್ಮ ಜೀವನ ಮತ್ತು ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆ ಅರಿವು ಮೂಡಿಸಲು ಅಭಿಯಾನ ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ರಮುಖವಾಗಿ ಯುವಕರು ಈ ದುಶ್ಚಟದ ಪಿಡುಗಿನಿಂದ ಹೊರಬರಬೇಕು. ಪ್ರತಿ ಇಲಾಖೆಗಳು ನಶಾ ಮುಕ್ತ ಜಿಲ್ಲೆಯನ್ನಾಗಿಸಲು ಕೈ ಜೋಡಿಸಬೇಕು. ಮುಖ್ಯವಾಗಿ ಹಳ್ಳಿಗಳಿಗೆ ಗಾಂಜಾ ಸರಬರಾಜು ಮಾಡುವವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿದೆ. ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಆಶಾ, ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಹಾಗೂ ವಿಶೇಷ ಚೇತನರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ತಿಮ್ಮರಾಜು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.