ಮದ್ದೂರು ತಾಲೂಕು ಮಾರಸಿಂಗನಹಳ್ಳಿ ಗ್ರಾಮದಲ್ಲಿ ತಿರುಮಲ ದೇವಾಲಯದ ಜೀರ್ಣೋದ್ಧಾರಕ್ಕೆ ಶಾಸಕರಾದ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ ಭೂಮಿಪೂಜೆ ನೆರವೇರಿಸಿದರು. ವಿನುತಾ ಉದಯ್, ಹರೀಶ್‌ಬಾಬು, ಪಿ.ಸಂದರ್ಶ, ಪುಟ್ಟಸ್ವಾಮಿ ಇದ್ದರು.
ಮದ್ದೂರು: ತಾಲೂಕಿನಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಅರ್ಪಿಸಲಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಬೆಸಗರಹಳ್ಳಿ ಜಿ.ಪಂ.ವ್ಯಾಪ್ತಿಯ ನಿಲುವಾಗಿಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 7 ಲಕ್ಷ ರೂ.ವೆಚ್ಚದ ಬಸ್ ತಂಗುದಾಣ ಹಾಗೂ ಮಾರಸಿಂಗನಹಳ್ಳಿ ಗ್ರಾಮದಲ್ಲಿ 50 ಲಕ್ಷ ರೂ.ವೆಚ್ಚದ ಎಂಪಿಸಿಎಸ್ ಹಾಗೂ ಬಿಎಂಸಿ ಕಟ್ಟಡ ನಿರ್ಮಾಣ ಮತ್ತು ತಿರುಮಲ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಮೂರು ತಿಂಗಳಲ್ಲಿ ಭಾರತಿನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕಾವೇರಿ ನೀರಾವರಿ ನಿಗಮದ ಸಬ್ ಡಿವಿಜನ್, ಕಾಂಗ್ರೆಸ್ ಕಚೇರಿ, ತಾಲೂಕು ಪಂಚಾಯಿತಿ ನೂತನ ಕಟ್ಟಡ, ವಿದ್ಯಾರ್ಥಿಗಳ ವಸತಿನಿಲಯ, ಸೂಳೆಕೆರೆ ಅಭಿವೃದ್ಧಿ, ಬನ್ನಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದೇ ವೇದಿಕೆಯಲ್ಲಿ ಸಮರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮರ್ಥವಾಗಿ ಅಧಿಕಾರ ನಡೆಸುತ್ತಿದ್ದಾರೆ. ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದರ ಮೂಲಕ ಎಲ್ಲ ಖಾತೆಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದರು.
ಮಳೆ ಇಲ್ಲದೆ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿದ ಬಳಿಕ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಸರ್ಕಾರ ಸೂಚನೆ ನೀಡಲಿದ್ದು ಬೆಳೆ ನಷ್ಟ ವರದಿ ಬಂದ ಬಳಿಕ ರೈತರಿಗೆ ಪರಿಹಾರ ಕೊಡಿಸಲು ಕ್ರಮವಹಿಸುವುದಾಗಿ ಹೇಳಿದರು.
ಕೆಮ್ಮಣ್ಣು ನಾಲೆ ಕಾಮಗಾರಿ ಪೂರ್ಣಗೊಂಡಿದ್ದು ಕೆಲ ತುಂಡು ಕಾಮಗಾರಿಗಳು ಬಾಕಿ ಇದೆ. ಬೈರನ್ ನಾಲೆ ಮತ್ತು ವೈದ್ಯನಾಥಪುರ ನಾಲೆಗಳ ಕಾಮಗಾರಿಗೆ ಚಾಲನೆ ದೊರೆತಿದೆ. ಹಾಗಾಗಿ ನಾಲೆಗಳಲ್ಲಿ ನೀರು ಹರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಹರಿಸುವ ಸಂಬಂಧ ಕ್ರಮ ವಹಿಸುವುದಾಗಿ ಹೇಳಿದರು.
ಇದೇ ವೇಳೆ ಗಾನ ಕೋಗಿಲೆ ಎಸ್.ಜಾನಕಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕಿ ವಿನುತಾ ಉದಯ್, ಮನ್‌ಮುಲ್ ನಿರ್ದೇಶಕ ಎಂ.ಕೆ.ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಎಂಪಿಸಿಎಸ್ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷೆ ಶೋಭಾ ಗೂಳಿಗೌಡ, ನಿರ್ದೇಶಕರಾದ ಗೂಳಿಗೌಡ, ಹರೀಶ್ ಬಾಬು, ಅಪ್ಪಾಜಿಗೌಡ, ಅಪ್ಪಾಜಿ, ದೇವಿರಮ್ಮ, ಸವಿತಾ, ಜಯಶೀಲಾ, ಕೆ.ಟಿ.ಲಕ್ಷ್ಮೀ, ಶ್ರೀಕಂಠ, ಆನಂದಮ್ಮ, ಮುಖಂಡರಾದ ರಾಮಚಂದ್ರ, ಕೃಷ್ಣೇಗೌಡ, ಗೂಳೇಶ್, ರಮೇಶ್, ಕಿರಣ್ ಇತರರಿದ್ದರು.