ಹಲಗೂರು ಸಮೀಪದ ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ ರೇಷ್ಮೆ ಬೆಳೆಗಾರರಿಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎ.ಬಿ.ರವಿ, ಎಸ್.ವಿ.ನರಸಿಂಹಮೂರ್ತಿ, ಆಶಾ, ಎಚ್.ಜಿ.ಕುಮಾರಿ, ಟಿ.ಆರ್.ಪೂಜಾ, ಬಿ.ಆರ್.ಕಿರಣ್ ಇತರರು ಇದ್ದರು.  
ಮಂಡ್ಯ

ಬೇಸಾಯಕ್ಕೆ ಹನಿ ನೀರಾವರಿ ಹೆಚ್ಚು ಸೂಕ್ತ

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ.ಸುಂದರ್ ರಾಜ್ ಸಲಹೆ
  • ಕೋಡಿಪುರದಲ್ಲಿ ಮೇರಾ ರೇಷಮ್ ಮೇರಾ ಅಭಿಯಾನ

ಹಲಗೂರು:

ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ರೈತರು ವ್ಯವಸಾಯ ಮಾಡಲು ಸಂಕಷ್ಟಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಬೇಸಾಯಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ನೀರಿನ ಸಮರ್ಪಕ ಬಳಕೆ ಸಾಧ್ಯವಾಗಲಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ.ಸುಂದರ್ ರಾಜ್ ರೈತರಿಗೆ ಸಲಹೆ ನೀಡಿದರು.

ತಾಂತ್ರಿಕ ಸೇವಾ ಕೇಂದ್ರ ಡಿ.ಹಲಸಹಳ್ಳಿ ವ್ಯಾಪ್ತಿಯ ಕೋಡಿಪುರ ಗ್ರಾಮದಲ್ಲಿ ಸೋಮವಾರ ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ ಏರ್ಪಡಿಸಿದ್ದ ಮೇರಾ ರೇಷಮ್ ಮೇರಾ ಅಭಿಯಾನ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು. ಇದೇ ವೇಳೆ ರೈತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ವಿಸ್ತರಣಾ ಉಪವಿಭಾಗ ಮದ್ದೂರಿನ ವಿಜ್ಞಾನಿ ಡಾ.ಶಿವಕುಮಾರ್, ಸರಿಯಾಯದ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.
ದ್ವಿತಳಿ ರೇಷ್ಮೆ ಬೆಳೆಯುವುದರಿಂದ ಆರ್ಥಿಕ ಲಾಭವು ಹೆಚ್ಚಾಗುವುದಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬಹುದು ಎಂದರು.
ಮೈಸೂರಿನ ಸಿಎಸ್‌ಆರ್ ಆ್ಯಂಡ್ ಟಿಐ ಸಂಸ್ಥೆ ರೂಪಿಸಿರುವ ಹಿಪ್ಪು ನೇರಳೆಯ ಹೊಸ ತಳಿ ಎಜಿಬಿ8 ಅತಿ ಹೆಚ್ಚು ಜನಪ್ರಿಯವಾಗಿದೆ. ಅಲ್ಲದೆ ಈ ತಳಿಯಲ್ಲಿ ನೀರನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಸೊಪ್ಪು ಬಹುಬೇಗ ಒಣಗುವುದಿಲ್ಲ. ಅಲ್ಲದೆ ಹೆಚ್ಚಿನ ಇಳುವರಿಯನ್ನೂ ಪಡೆಯಬಹುದಾಗಿದೆ ಎಂದರು.
ಕೆ.ಆರ್.ಪೇಟೆಯ ರೇಷ್ಮೆ ತರಬೇತಿ ಸಂಸ್ಥೆ ಪ್ರಾಚಾರ್ಯ ಡಿ.ಸೋಮಣ್ಣ ಮಾತನಾಡಿ, ಹಿಪ್ಪುನೇರಳೆ ಬೆಳೆಗಾರರು ರಾಸಾಯನಿಕ ಗೊಬ್ಬರವನ್ನು ಮಿತವಾಗಿ ಬಳಸಿ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕು. ಅಲ್ಲದೆ ತೋಟದಲ್ಲಿ ಸರಿಯಾದ ಗಾಳಿ ಸಂಚಾರ ಹಾಗೂ ಬೆಳಕು ಅತ್ಯಗತ್ಯ. ಜತೆಗೆ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಶೇಖರಣೆಯಾಗುವ ಹಾಸಿಗೆ ಕಸದಿಂದ ಉತ್ಕೃಷ್ಟ ಗೊಬ್ಬರವನ್ನು ತಯಾರಿಸಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೆ ರೇಷ್ಮೆ ಗೂಡಿನ ಇಳುವರಿ ಕೂಡ ವೃದ್ಧಿಸಿ ರೈತರಿಗೆ ಲಾಭವಾಗಲಿದೆ ಎಂದರು.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎ.ಬಿ.ರವಿ, ರೇಷ್ಮೆ ವಿಸ್ತರಣಾಧಿಕಾರಿ ಎಸ್.ವಿ.ನರಸಿಂಹಮೂರ್ತಿ, ಆಶಾ, ಎಚ್.ಜಿ.ಕುಮಾರಿ, ಟಿ.ಆರ್.ಪೂಜಾ, ರೇಷ್ಮೆ ನಿರೀಕ್ಷಕ ಬಿ.ಆರ್.ಕಿರಣ್, ಎಂ.ನವೀನ್, ಉದಯಶಂಕರ್ ಹಾಗೂ ಕೋಡಿಪುರ ಗ್ರಾಮದ ರೇಷ್ಮೆ ಬೆಳೆಗಾರರು ಹಾಜರಿದ್ದರು.