ಮಂಡ್ಯ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಅಸೋಸಿಯೇಷನ್ ಆಲಯನ್ಸ್ ಸಂಸ್ಥೆಯಲ್ಲಿ ಡಾ.ಶಿವಕುಮಾರ ಮಹಾ ಸ್ವಾಮೀಜಿ ಜಯಂತ್ಯುತ್ಸವ ಆಚರಿಸಲಾಯಿತು.  
ಮಂಡ್ಯ

ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡಲಿ: ಅಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ ಹನುಮಂತು ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಜಯಂತ್ಯುತ್ಸವ ಆಚರಣೆ
  • ಅಸೋಸಿಯೇಷನ್ ಆಲಯನ್ಸ್‌ನಿಂದ ಆಯೋಜನೆ
ಮಂಡ್ಯ: ನಾಡು ಕಂಡ ಅಪ್ರತಿಮ ಸಂತ ಡಾ.ಶಿವಕುಮಾರ ಸ್ವಾಮೀಜಿ ಅವರ ಜೀವಮಾನ ಸಾಧನೆಯನ್ನು ಗಮನಿಸಿ ಸಾಕಷ್ಟು ಪ್ರಶಸ್ತಿ ಪುರಸ್ಕಾರ ಸಂದಿದೆ. ಆದರೂ ಕೇಂದ್ರ ಸರ್ಕಾರ ಭಾರತ ರತ್ನ ಗೌರವ ಪುರಸ್ಕಾರ ನೀಡದಿರುವುದು ನಿಜಕ್ಕೂ ವಿಷಾಧನೀಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು ಬೇಸರ ವ್ಯಕ್ತಪಡಿಸಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿ ಶುಕ್ರವಾರ ಅಸೋಸಿಯೇಷನ್ ಆಲಯನ್ಸ್‌ನ ಜಿಲ್ಲಾ ಪ್ರಾಂತಪಾಲರ ಕಚೇರಿ ಉದ್ಘಾಟನೆ ಮತ್ತು ನಡೆದಾಡಿದ ದೇವರು ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲ ಪ್ರಶಸ್ತಿಗಳು ಪಡೆದ ವ್ಯಕ್ತಿಗಳಿಗೆ ಗೌರವ ಹೆಚ್ಚಿಸುತ್ತವೆ. ಮತ್ತೆ ಕೆಲವು ವ್ಯಕ್ತಿಗಳಿಗೆ ನೀಡುವ ಪ್ರಶಸ್ತಿಗಳಿಂದ ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗುತ್ತದೆ ಎಂದರು.
ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ನಡೆ ನುಡಿ ತೀರಾ ಸರಳಾತಿ ಸರಳ ಹಾಗೂ ಮಿತ ಭಾಷಿ. ಮಾತಿಗಿಂತ ಕೃತಿಯ ಮೂಲಕ ಸಾಧಿಸುವ ಮೌನ ಸಾಧಕ. ಹಾಗಾಗಿಯೇ ಅವರನ್ನು ನಡೆದಾಡುವ ದೇವಪುರುಷ ಎಂದೇ ಕರೆಯುತ್ತಿದ್ದರು. ಬಸವಣ್ಣನವರ ಕಾಯಕವೇ ಕೈಲಾಸ ಸಿದ್ಧಾಂತದ ನೈಜ ಪ್ರತಿಪಾದಕ. ಅವರ ಸೇವಾ ಕಾರ್ಯಕ್ರಮದ ಮೂಲಕವೇ ಮನೆಮಾತಾದವರು. ಅವರು ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯ ಸೇವಾ ಕಾರ್ಯಕ್ರಮ ಹಾಗೂ ಸಂಸ್ಥೆ ಗಳ ಮೂಲಕ ಎಂದೆಂದಿಗೂ ಇರುತ್ತಾರೆ ಎಂದರು.
ಅಲಯನ್ಸ್ ಸಂಸ್ಥೆಯ ನೂತನ ಜಿಲ್ಲಾ ಪ್ರಾಂತಪಾಲ ಕೆ.ಆರ್.ಶಶಿಧರ ಈಚೆಗೆರೆ ಮಾತನಾಡಿ, ಅಲಯನ್ಸ್‌ನ ಸಾಮಾಜಿಕ ಕಳಕಳಿ, ಸೇವೆ, ಸಂಸ್ಥೆಗಳ ಹಾಗೂ ಸದಸ್ಯರ ಸಹಕಾರದೊಂದಿಗೆ ಎಂದಿನಂತೆಯೇ ಜಿಲ್ಲೆಯನ್ನು ಅತ್ಯುತ್ತಮವಾಗಿ ಮುನ್ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಒಂದನೇ ಉಪ ಪ್ರಾಂತಪಾಲ ಚಂದ್ರಶೇಖರ ಕೀಲಾರ, ಎರಡನೇ ಉಪ ಪ್ರಾಂತಪಾಲ ಶಿವಣ್ಣ, ನಾಗರಾಜು, ಪ್ರೊ.ಶಿವಕುಮಾರ್, ನೀನಾ ಪಟೇಲ್, ರತ್ನಮ್ಮ, ಕುಮಾರ್, ಪುಟ್ಟಲಿಂಗಯ್ಯ, ರಕ್ಷಿತ್‌ರಾಜ್, ರಶ್ಮಿ, ಕೃಷ್ಣಪ್ಪ, ವಿ.ಸಿ.ಹೊಂಬೇಗೌಡ, ಸಿದ್ದೇಗೌಡ, ಕೃಷ್ಣೇಗೌಡ, ಪ್ರಶಾಂತ್, ಸುನೀತಾ, ಪ್ರೀತಿ, ಲೀಲಾ, ಪವಿತ್ರಾ, ಮಹಾಲಕ್ಷ್ಮೀ, ಸ್ಪೂರ್ತಿ, ಚಿಕ್ಕಣ್ಣಗೌಡ ಇತರರಿದ್ದರು. ಈ ಸಂದರ್ಭದಲ್ಲಿ ಗಾಯಕ ಪ್ರತಿಭಾಂಜಲಿ ಡೇವಿಡ್ ಡಾ.ಶಿವಕುಮಾರ ಸ್ವಾಮೀಜಿ ಕುರಿತು ಗೀತೆಗಳನ್ನು ಹಾಡಿದರು. ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ ಕಾರ್ಯಕ್ರಮ ನಿರೂಪಿಸಿದರು.