ಮಂಡ್ಯ ನಗರದ ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನ ಸಭಾಂಗಣದಲ್ಲಿ ಆಯೋಜಿಸಿದ್ದ ವರನಟ ಡಾ.ರಾಜಕುಮಾರ್ ಜನ್ಮದಿನಾಚರಣೆಯನ್ನು ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಉದ್ಘಾಟಿಸಿದರು.
- ಮಹಿಳಾ ಕಾಲೇಜಿನಲ್ಲಿ ಜಯಂತ್ಯುತ್ಸವ
- ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜನೆ
ಮಂಡ್ಯ: ಡಾ.ರಾಜಕುಮಾರ್ ಅವರು ಮೇರು ನಟರಾಗಿದ್ದರು. ಆದರೂ ಸಹ ಸ್ವಲ್ಪವೂ ಕೂಡ ಅಹಂ ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೀರ್ತಿ ತಂದು ಕೊಟ್ಟವರು. ಅವರ ಸರಳ ಜೀವನ ಶೈಲಿ ಹಾಗೂ ನೈತಿಕ ಮೌಲ್ಯ, ಆದರ್ಶಗಳನ್ನು ಯುವ ಜನತೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಕರೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಮಹಿಳಾ ಕಾಲೇಜು(ಸ್ವಾಯತ್ತ) ಸಹಯೋಗದಲ್ಲಿ ಆಯೋಜಿಸಿದ್ದ ವರನಟ ಡಾ.ರಾಜಕುಮಾರ್ ಅವರ 97ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಚಿತ್ರರಂಗಕ್ಕೆ ಡಾ.ರಾಜಕುಮಾರ್ ಅವರ ಕೊಡುಗೆ ಅಪಾರ. ಅವರ ಕಲಾಸೇವೆ ಅಸಂಖ್ಯಾತ ಪ್ರಶಸ್ತಿ ಒಲಿದುಬಂದಿದೆ. ನಿರ್ಮಾಪಕರನ್ನೇ ಅನ್ನದಾತರೆಂದು ಅವರಿಗೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಿದ್ದರು. ಅವರ ಸರಳ ಜೀವನ ಎಲ್ಲರಿಗೂ ಮಾದರಿ ಎಂದರು.
ವಿಶೇಷ ಉಪನ್ಯಾಸ ನೀಡಿದ ಮೈಸೂರು ಮಹಾರಾಣಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ.ವಿ.ನಾಗರಾಜ ಮಾತನಾಡಿ, ಕನ್ನಡ ಚಿತ್ರರಂಗದ ಮೇರುನಟ, ಗಾಯಕ ಮತ್ತು ಸಾಂಸ್ಕೃತಿಕ ಐಕಾನ್, ನಟಸಾರ್ವಭೌಮ ಎಂದೇ ಕರೆಯಲ್ಪಡುವ ಡಾ.ರಾಜ್ ಅವರು ಐದು ದಶಕಗಳ ವೃತ್ತಿ ಜೀವನದಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಅವರು, ಕನ್ನಡ ಚಿತ್ರರಂಗದ ಧ್ರುವತಾರೆ ಎಂದು ತಿಳಿಸಿದರು.
ಕನ್ನಡ ಚಿತ್ರಗಳಲ್ಲಿ ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಸೇರಿದಂತೆ ಸಮಾಜಕ್ಕೆ ಎಲ್ಲ ರೀತಿಯಲ್ಲೂ ಕಲಾ ಮಾಧ್ಯಮದ ಮೂಲಕ ಉತ್ತಮ ಸಂದೇಶವನ್ನು ನೀಡಿದ ಮೇರು ನಟ ಡಾ.ರಾಜಕುಮಾರ ಅವರ ಎಲ್ಲ ಚಿತ್ರಗಳು, ಯಾವುದೇ ಪಾತ್ರ, ಸಂಭಾಷಣೆ ಹಾಗೂ ಹಾಡುಗಳು ಸಹ ಸೆನ್ಸಾರ್ ಕತ್ತರಿಗೆ ಒಳಪಟ್ಟಿಲ್ಲ. ಹೀಗಾಗಿ ಒಳ್ಳೆಯ ಸಂಸ್ಕಾರ ಕಲಿಯಲು ಆದರ್ಶವನ್ನು ಅಳವಡಿಸಿಕೊಳ್ಳಲು ರಾಜಕುಮಾರ ಅವರ ಚಿತ್ರಗಳು ಮಾದರಿಯಾಗಿವೆ. ಯುವ ಸಮೂಹವು ನೈತಿಕತೆ, ಮಾನವೀಯತೆ ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು. ದೇಶದ ಅಭಿವೃದ್ಧಿ ಹಾಗೂ ಭವಿಷ್ಯ ಯುವ ಜನತೆಯಿಂದ ಮಾತ್ರ ಸಾಧ್ಯ. ಯುವ ಜನತೆಯೂ ಮಾನವೀಯತೆಯ ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು ಎಂದು ತಿಳಿಸಿದರು.
ವಾರ್ತಾ ಮತ್ತು ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ರವಿಕಾಂತ್ ಲಂಬಾಣಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಪತ್ರಕರ್ತ ದೇವರಾಜು ಕೊಪ್ಪ, ಪ್ರಾಧ್ಯಾಪಕರಾದ ದಾನೇಗೌಡ, ಶಿವರಾಜು ಇತರರಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕ ಮನ್ಸೂರ್ ಪಾಷಾ ಅವರು ರಾಜಕುಮಾರ ನಟಿಸಿರುವ ಚಿತ್ರಗೀತೆ ಹಾಡಿ ಗಮನ ಸೆಳೆದರು.