ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಕನ್ನಡದ ಮಹಾಕವಿ ಡಾ.ಪು.ತಿ.ನ ಅವರ 121ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು.
- ನಗರದಲ್ಲಿ ಜನ್ಮದಿನೋತ್ಸವ ಆಚರಣೆ
- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಪು.ತಿ.ನ ಟ್ರಸ್ಟ್ ಮೇಲುಕೋಟೆ ಆಯೋಜನೆ
ಮಂಡ್ಯ: ಕನ್ನಡ ಮಹಾಕವಿ ಪುರೋಹಿತ ತಿರುನಾರಾಯಣ ನರಸಿಂಹಾಚಾರ್(ಡಾ.ಪು.ತಿ.ನ) ಅವರ ಮೌಲ್ಯ, ಆದರ್ಶ, ಚಿಂತನೆಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಪು.ತಿ.ನ ಟ್ರಸ್ಟ್ ಮೇಲುಕೋಟೆ, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಆಯೋಜಿಸಿದ್ದ ಕನ್ನಡದ ಮಹಾಕವಿ ಡಾ.ಪು.ತಿ.ನ ಅವರ 121ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಪುಸ್ತಕವನ್ನು ಓದುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂತೆಯೇ ನಮ್ಮ ನಾಡು, ನುಡಿ, ಪರಂಪರೆ, ಇತಿಹಾಸವನ್ನು ಅರಿತುಕೊಳ್ಳಬೇಕು. ಪು.ತಿ.ನ ಅವರ ಮೌಲ್ಯ, ಚಿಂತನೆ, ಆದರ್ಶವನ್ನು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.
ಪು.ತಿ.ನ ಕನ್ನಡದ ನವೋದಯ ಕಾಲದ ಪ್ರಮುಖ ಕವಿ. ಗೀತನಾಟಕಕಾರರು ಮತ್ತು ವಿದ್ವಾಂಸರು. ಮಂಡ್ಯ ಜಿಲ್ಲೆಯ ಮೇಲುಕೋಟೆಯವರಾದ ಅವರು ಸಂಸ್ಕೃತ ಮತ್ತು ಇಂಗ್ಲೀಷ್‌ನಲ್ಲಿ ಪಾಂಡಿತ್ಯ ಹೊಂದಿದ್ದರು. ಇಂತಹವರ ಬಗ್ಗೆ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ವೃತ್ತಿಯಿಂದ ನಿವೃತ್ತಿಯಾದರೂ ಪ್ರೌವೃತ್ತಿಯಿಂದ ನಿವೃತ್ತಿಯಾಗದೆ ಸಾಹಿತ್ಯ ವೃತ್ತಿಯಲ್ಲಿ ಅಪಾರ ಚಿಂತನೆಯನ್ನು ಇಟ್ಟುಕೊಂಡು ಪ್ರೊ.ಎಂ.ಕೃಷ್ಣೇಗೌಡ ಅವರು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಸಮಾಜಕ್ಕೆ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತಿಯ ರಾಯಭಾರಿಯಾಗಿ ಸಾಮಾಜಿಕ ಚಿಂತನೆಗಳನ್ನು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಕೆಲಸ ಆಗುತ್ತಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.
ಪು.ತಿ.ನ ಅತ್ಯಂತ ಶ್ರೇಷ್ಠ ಕವಿ. ಅವರ ಸಾಹಿತ್ಯ ಮತ್ತು ವೃತ್ತಿ ಬದುಕನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅವರ ಸಾಹಿತ್ಯದ ಮೌಲ್ಯ, ಭಾವನೆ ಹಾಗೂ ಚಿಂತನೆಯನ್ನು ಓದಬೇಕು. ವಿದ್ಯಾರ್ಥಿಗಳು ಮೊದಲು ಸಾಹಿತ್ಯವನ್ನು ಅರ್ಥೈಸಿಕೊಳ್ಳಬೇಕು. ಅದರಂತೆ ಸಾಹಿತ್ಯದ ಪ್ರಕಾರವನ್ನು ಅರಿತುಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ನಮ್ಮ ನಾಡಿನ ಪರಂಪರೆ ಕಲೆ, ಸಾಹಿತ್ಯ, ಸಂಸ್ಕೃತಿ, ಚಿಂತನೆಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಅದನ್ನು ಬೆಳೆಸುವಂತಹ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಹಾಗೂ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಕೊಡುಗೆ ನೀಡಿದೆ. ಕವಿಗಳು ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪು.ತಿ.ನ ಅವರು ಅತ್ಯುತ್ತಮ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸಾಹಿತ್ಯ ಬಹಳ ಗಟ್ಟಿಯಾಗಿದೆ. ಹಾಗಾಗಿ ಸಾಹಿತ್ಯ ಇನ್ನೂ ತನ್ನ ವೈಭವ ಉಳಿಸಿಕೊಂಡಿದೆ. ಪು.ತಿ.ನ ಅವರ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ತಂದೆ-ತಾಯಿಗಿಂತ ಮಿಗಿಲಾದ ಶಕ್ತಿ ಯಾವುದು ಇಲ್ಲ ಎನ್ನುವ ಸತ್ಯವನ್ನು ಎಲ್ಲ ಮಕ್ಕಳು ಅರ್ಥೈಸಿಕೊಳ್ಳಬೇಕು. ಅದೇ ರೀತಿ ಪಾಲಕರನ್ನು ಗೌರವಿಸುವುದರ ಜತೆಗೆ ಅವರಿಗೆ ಗೌರವ ತರುವಂತಹ ಕೆಲಸ ಮಾಡಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳಿಗೆ ಬೆಲೆ ಕೊಡಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಡಾ.ಪು.ತಿ.ನ ಟ್ರಸ್ಟ್ ಅಧ್ಯಕ್ಷರೂ ಆದ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಕನ್ನಡದ ಪ್ರಖ್ಯಾತ ಲೇಖಕ ಜೋಗಿ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಹರ್ಷ, ಟ್ರಸ್ಟ್‌ನ ಸದಸ್ಯರಾದ ಪಿ.ಸುಮಾರಾಣಿ ಶಂಭು, ಕುಮಾರ ಕೊಪ್ಪ ಇತರರಿದ್ದರು.
ಭಕ್ತಿ ಭಾವಗೀತೆಗೆ ಹೊಸ ಆಯಾಮ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಹಾಗೂ ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಪುರೋಹಿತ ತಿರುನಾರಾಯಣ ನರಸಿಂಹಾಚಾರ್(ಪು.ತಿ.ನ) ಕನ್ನಡಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಯದುಗಿರಿಯ ವೀಣೆ, ಗೋಕುಲ ನಿರ್ಗಮನ(ಗೀತನಾಟಕ) ಮುಂತಾದ ಕೃತಿಗಳ ಮೂಲಕ ಭಕ್ತಿ ಹಾಗೂ ಭಾವಗೀತೆಗಳಿಗೆ ಹೊಸ ಆಯಾಮ ನೀಡಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪು.ತಿ.ನ ಅವರ ನಾಟಕಗಳಲ್ಲಿ ಸಂಗೀತವೇ ಪ್ರಧಾನವಾಗಿತ್ತು. ಜತೆಗೆ ಆಧ್ಯಾತ್ಮಿಕ ಚಿಂತನೆಯನ್ನು ಹೊಂದಿದವರು. ಅವರ ಸಮಾಧಿಯನ್ನು ಹೂದೋಟಕ್ಕೆ ಪರಿವರ್ತಿಸಲಾಗಿದೆ. ಪು.ತಿ.ನ ಅವರು ಹಣತೆ ಹಂಸದಾಮಯಂತಿ ಅಹಲ್ಯ ಶ್ರೇಷ್ಟ ಕೃತಿ ಬರೆದು ಪದಶ್ರೀ ಹಾಗೂ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಾತ್ರವಲ್ಲದೆ 60ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಅವರ ಹಣತೆ ಎಲ್ಲರಿಗೂ ಬೆಳಕಾಗಲಿ ಎಂದು ತಿಳಿಸಿದರು.