ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
- ನಗರದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ
- ಭಾರತ ಸೇವಾದಳ ಜಿಲ್ಲಾ ಘಟಕ, ಸೇಂಟ್‌ಜಾನ್ ಆಂಬುಲೆನ್ಸ್ ಇಂಡಿಯಾ ಜಿಲ್ಲಾ ಶಾಖೆಯಿಂದ ಆಯೋಜನೆ
ಮಂಡ್ಯ ಸಾಧನೆಯ ಜಿಲ್ಲೆ. ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಆದರೆ, ಇಲ್ಲಿನ ಗಂಡುಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇದನ್ನು ಗಂಡುಮಕ್ಕಳು ನನಗೆ ಹೇಳಿಕೊಂಡು ಅಳುತ್ತಾರೆ. ಹೆಣ್ಣುಭ್ರೂಣ ಹತ್ಯೆಯ ಪ್ರಭಾವದಿಂದ ಮದುವೆಗೆ ವಧು ಸಿಗುತ್ತಿಲ್ಲ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹೇಳಿದರು.
ನಗರದ ಬಾಲಭವನದ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಘಟಕ, ಸೇಂಟ್‌ಜಾನ್ ಆಂಬುಲೆನ್ಸ್ ಇಂಡಿಯಾ ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ ಡಾ.ನಾ.ಸು.ಹರ್ಡೀಕರ್ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾವಂತ ಹುಡುಗಿಯರು ತಮ್ಮ ಸಾಧನೆ ತಲುಪಿದ ನಂತರ ಮದುವೆಯಾಗಿ ಎಂದು ಸಲಹೆ ನೀಡಿದರು.
ಎಲ್ಲರಿಗೂ ಅಧಿಕಾರ ಸಿಗುವುದಿಲ್ಲ, ಇರುವ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಿವರಿಗೆ ಮಾತ್ರ ಅಧಿಕಾರ, ಗೌರವ ಲಭಿಸುತ್ತದೆ. ಅಧಿಕಾರ ಎಂದರೆ ಸೇವೆ ಮಾತ್ರ, ಸೇವೆ ಮಾಡುವ ಅವಕಾಶ ಎಲ್ಲರಿಗೂ ಲಭಿಸಲ್ಲ. ಸಾರ್ವಜನಿಕ ಜೀವನದಲ್ಲಿ ಹೆಣ್ಣುಮಗಳು ಬೆಳೆಯಬೇಕು ಎಂದರೆ ಕಷ್ಟ. ಅದೂ ರಾಜಕಾರಣದಲ್ಲಿ ಬಹಳ ಕಷ್ಟ. ಹಣ ಬಲ ತೋಳ್ಬಲ ಅಥವಾ ರಾಜಕೀಯ ಕುಟುಂಬದ ಹಿನ್ನೆಲೆ ಇರಬೇಕು. ಇದ್ಯಾವುದೂ ಇಲ್ಲದೆ ಬೆಳೆಯಬೇಕು ಎಂದರೆ ಪರಿಶ್ರಮ, ಪ್ರತಿಭೆ, ಉತ್ತಮ ಶಿಕ್ಷಣ ಇರಬೇಕು ಎಂದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಜಿ.ವಿ.ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಣವನ್ನು ನಮ್ಮ ಮಕ್ಕಳು ಪಡೆಯುತ್ತಿದ್ದಾರೆ. ನಮ್ಮ ಎರಡು ಸಂಘಟನೆಗಳ ಮುಖಾಂತರ ಶೇ.90ರಷ್ಟು ಅಂಕ ಪಡೆದ ಪ್ರತಿಭಾವಂತರಿಗೆ ನಗದು ಪುರಸ್ಕಾರ ಮತ್ತು ಪ್ರಥಮ ಸ್ಥಾನ ಪಡೆದ ಪ್ರತಿಭಾವಂತರಿಗೂ ಪುರಸ್ಕಾರ ನೀಡುತ್ತಿದ್ದೇವೆ ಎಂದು ನುಡಿದರು.
ಈ ಸಾಲಿನಲ್ಲಿ ಒಂದು ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರು. ಕಳೆದ ವರ್ಷ 450 ಜನ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದ್ದೇವೆ. ಪ್ರತಿವರ್ಷ ಹೆಚ್ಚಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಅಂತೆಯೇ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಂಕ ಗಳಿಸಿದ್ದಾರೆ ಎಂದು ತಿಳಿಸಿದರು.
ಹಿರಿಯ ನಟ ಶಂಕರ್ ಅಶ್ವಥ್, ಸೇವಾದಳದ ಬಿ.ಸಿ.ಶಿವಾನಂದ, ಶಿವಪ್ರಕಾಶ್‌ಬಾಬು, ಸೇಂಟ್‌ಜಾನ್ ಆಂಬುಲೆನ್ಸ್ ಇಂಡಿಯಾ ಜಿಲ್ಲಾ ಶಾಖೆಯ ಸಜ್ಜನ್‌ಕೊಠಾರಿ, ಸಿ.ಎಸ್.ಗಣೇಶ್, ಕೆ.ಎಂ.ಕೆ.ರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮೀ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್‌ಕುಮಾರ್, ವಿನಯ್‌ಕುಮಾರ್, ನಾರಾಯಸ್ವಾಮಿ, ಉಷಾರಾಣಿ ಇತರರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧನೆ ಮಾಡಿರುವ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದ್ರು ಮದ್ದೂರು, ಭಾರತ ಸೇವಾದಳ ಪ್ರಧಾನ ಕಾರ್ಯದರ್ಶಿ ಕಮಲ್‌ಕುಮಾರ್, ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಅವರಿಗೆ ಡಾ.ನಾ.ಸು.ಹರ್ಡೀಕರ್ ಪ್ರಶಸ್ತಿ ಹಾಗೂ ಸಮಾಜ ಸೇವಕ ಡಾ.ವೈ.ಎಸ್.ರಾಮರಾವ್ ಪ್ರಶಸ್ತಿಯನ್ನು ಡಾ.ಪ್ರಕಾಶ್‌ಗುಪ್ತ, ಶಿವಶಂಕರ್, ಡಾ.ಎಂ.ಜಿ.ಆರ್.ಅರಸ್ ಅವರಿಗೆ ಪ್ರದಾನ ಮಾಡಲಾಯಿತು.