ಕಾಳೇಗೌಡ ಅವರು ನಾಟಿಕೋಳಿಗಳನ್ನು ಸಾಕಿರುವುದು.
ಮದ್ದೂರು: ಒಂದೇ ಬೆಳೆಯನ್ನು ನಂಬಿಕೊಳ್ಳದೆ ಕಾಳೇಗೌಡ ಅವರು ಇಳಿ ವಯಸ್ಸಿನಲ್ಲೂ ಶ್ರಮಪಟ್ಟು ಮಿಶ್ರ ಬೇಸಾಯ ಮಾಡುವ ಮೂಲಕ ಪ್ರತಿ ವರ್ಷ ಲಕ್ಷಾಂತರ ರೂ.ಆದಾಯ ಗಳಿಸಿ ಗಮನ ಸೆಳೆದಿದ್ದಾರೆ.
ತಾಲೂಕಿನ ಆತಗೂರು ಹೋಬಳಿಯ ಅಂಕನಾಥಪುರ ಗ್ರಾಮದ ರೈತ ಮಾದೇಗೌಡರ ಅವರ ಪುತ್ರ 65 ವರ್ಷದ ಕಾಳೇಗೌಡ ಕೃಷಿಯನ್ನು ಮಕ್ಕಳಂತೆ ಪ್ರೀತಿಸಿ, ಖುಷಿ ಕಾಣಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
ಇವರಿಗೆ ಸುಮಾರು 5 ಎಕರೆ ಪ್ರದೇಶದ ಜಮೀನಿದ್ದು, ಅಡಿಕೆ 1500, ತೆಂಗು 250, ಕಾಫಿಗಿಡ 100, ಮೆಣಸು 50, ತೇಗದ ಮರ 40, ಏಲಕ್ಕಿ 60, ಮಾವಿನ ಮರ 10, ಹೆಬ್ಬೆವು 50, ಡ್ರ್ಯಾಗನ್ ಫ್ರೂಟ್ಸ್ 5, ನಾಟಿ ಕೋಳಿ 50, ಆಡು 10, ಕುರಿ 5, ಮಲೆನಾಡು ಗಿಡ್ಡ ಹಸು 5, ಎಮ್ಮೆ 1, ಪರಂಗಿ 10, ನುಗ್ಗೆ 10, ಹಲಸಿನ, ಸೀಬೆ, ಚಕ್ಕೋತ್ತಾ, ವಿಳ್ಯಾದೆಲೆ ಸೇರಿದಂತೆ ಇನ್ನಿತರರ ಬೆಳೆಗಳನ್ನು ಬೆಳೆದಿದ್ದಾರೆ. ಕೃಷಿ ಹೊಂಡದಲ್ಲಿ ಸುಮಾರು 2 ಸಾವಿರ ಮೀನಿನ ಮರಿಗಳನ್ನು ಸಾಕುತ್ತಿದ್ದು, ಕೈ ತುಂಬಾ ಆದಾಯಗಳಿಸುತ್ತಿದ್ದಾರೆ.
ಚಿಕ್ಕ ವಯಸ್ಸಿನಿಂದಲ್ಲೂ ಕೃಷಿ ಮೇಲಿನ ಅಪಾರವಾದ ಪ್ರೀತಿ ಹಾಗೂ ತಂದೆ ಮಾಡುತ್ತಿದ್ದ ಕೃಷಿಯನ್ನು ನೋಡಿ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಪಣತೊಟ್ಟು ಯಶಸ್ವಿಯಾಗಿದ್ದಾರೆ. ಇವರು ಮಾಡುತ್ತಿರುವ ಕೃಷಿಗೆ ರಾಸಾಯಾನಿಕ ಬಳಕೆ ಮಾಡದೆ ಕೊಟ್ಟಿಗೆ, ಕೋಳಿ ಗೊಬ್ಬರ, ಬೆಳೆಗಳ ತ್ಯಾಜ್ಯ ಹಾಗೂ ಇನ್ನಿತರ ಸಾವಯವ ಗೊಬ್ಬರಗಳನ್ನು ಬಳಕೆ ಮಾಡಿಕೊಂಡು ಕೃಷಿ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ಹೆಚ್ಚುವ ಜತೆಗೆ ಉತ್ತಮ ಗುಣಮಟ್ಟದ ಫಸಲು ಬರಲು ಕಾರಣವಾಗಿದೆ.
ಇವರು ಕೃಷಿ ಮಾಡುತ್ತಿರುವ ಭೂಮಿ ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ 2 ಬೋರ್‌ವೆಲ್‌ಗಳನ್ನು ಕೊರೆಸಿದ್ದಾರೆ ಹಾಗೂ ಮೀನುಸಾಗಾಣಿಕೆ ಮಾಡಲು ಕೃಷಿ ಹೊಂಡ ತೆಗೆಸಿದ್ದಾರೆ. ಕೃಷಿ ಹೊಂಡ ಹಾಗೂ ಬೋರ್‌ವೆಲ್ ನೀರು ಬಳಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಗತ್ಯವಿದ್ದಾಗ ಮಾತ್ರ ಕೃಷಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಕಾಳೇಗೌಡರು ಮಾಡುತ್ತಿರುವ ಕೃಷಿಗೆ ಪತ್ನಿ ಪಾರ್ವತಮ್ಮ, ಪುತ್ರ ಯಶವಂತ್, ಪುತ್ರಿ ಕಲ್ಪಶ್ರೀ ಸೇರಿದಂತೆ ಇಡೀ ಕುಟುಂಬ ಸಾಥ್ ನೀಡುತ್ತಿದೆ.
ಇವರು ಸಾಕುತ್ತಿರುವ ನಾಟಿ ಕೋಳಿ ಮತ್ತು ಮೊಟ್ಟೆಗೆ ತುಂಬ ಬೇಡಿಕೆಯಿದ್ದು, ಅಂಕನಾಥಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಇವರ ಬಳಿ ಬಂದು ಖರೀದಿ ಮಾಡುತ್ತಿರುವುದು ವಿಶೇಷವಾಗಿದೆ. ಇವರ ಕೃಷಿ ಪದ್ಧತಿಯನ್ನು ನೋಡಲು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಹಾಗೂ ಕೃಷಿ ಅಧಿಕಾರಿಗಳ ಪ್ರಶಂಸೆ ಪಾತ್ರವಾಗಿದ್ದಾರೆ. ಸಮಗ್ರ ಬೇಸಾಯದಿಂದ ಒಂದು ವೇಳೆ ಮಳೆ ಕೈಕೊಟ್ಟು ಬೆಳೆ ನಷ್ಟವಾದರೂ, ಹಾಲು, ಮೊಟ್ಟೆ ಅಥವಾ ಮಾಂಸದ ಮಾರಾಟದಿಂದ ರೈತರಿಗೆ ನಿರಂತರ ಆದಾಯ ಸಿಗುತ್ತದೆ. ಜತೆಗೆ ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ರೈತರಿಗೆ ವರ್ಷವಿಡೀ ಕೆಲಸ ಮತ್ತು ವಿವಿಧ ಬೆಳೆಗಳಿಂದ ಆದಾಯದ ಮೂಲವಿರುತ್ತದೆ ಎನ್ನತ್ತಾರೆ ಕಾಳೇಗೌಡ.