ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
- ವಿದ್ಯಾರ್ಥಿಗಳಿಗೆ ಉಪನ್ಯಾಸಕ ಚಂದ್ರಾಜು ಸಲಹೆ
ಹಲಗೂರು: ವಿದ್ಯಾರ್ಥಿ ಜೀವನದಲ್ಲಿ ಸಮಯ ಅತ್ಯಂತ ಅಮೂಲ್ಯವಾಗಿದ್ದು, ಕಲಿಕೆ ಸಮಯದಲ್ಲಿ ವಿದ್ಯಾರ್ಥಿಗಳು ಅನಗತ್ಯವಾಗಿ ಮೊಬೈಲ್ ಬಳಕೆಯಿಂದ ದೂರವಿರಿ ಎಂದು ಉಪನ್ಯಾಸಕ ಚಂದ್ರಾಜು ಸಲಹೆ ನೀಡಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಪರೀಕ್ಷಾ ಸಮಯದಲ್ಲಿ ಗಡಿಬಿಡಿ ಮಾಡಿಕೊಂಡು ಓದುವ ಬದಲು ಜೂನ್‌ನಿಂದಲೇ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಅಂಕ ಗಳಿಸುವ ಜತೆಗೆ ಮಾನವೀಯ ಮೌಲ್ಯಗಳನ್ನೂ ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜೈಶಂಕರ್ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದದ್ದು ಬೇರಾವುದೂ ಇಲ್ಲ. ಬಡತನದ ಹಿನ್ನೆಲೆಯಲ್ಲಿ ಬಂದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ವಿದ್ಯೆ ಸೋಮಾರಿಗಳಿಗೆ ಒಗ್ಗದು. ಏಕಾಗ್ರತೆಯಿಂದ ಸಾಧನೆ ಕಡೆ ಗಮನಹರಿಸಿದರೆ ಗುರಿ ಸಾಧನೆ ಸಾಧ್ಯ ಎಂದರು.
2025-26ನೇ ಶೈಕ್ಷಣಿಕ ಸಾಲಿನ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಮಾನಸಾ, ಪ್ರಿಯಾಂಕಾ, ಪದ್ಮಾ, ಉಮ್ಮೆಹಾನಿ, ಪ್ರಿಯಾಂಕಾ, ರಮ್ಯಾ, ತೇಜಸ್ವಿನಿ ಅವರನ್ನು ಕಾಲೇಜು ವತಿಯಿಂದ ಅಭಿನಂದಿಸಲಾಯಿತು. ಉಪ ಪ್ರಾಂಶುಪಾಲೆ ಅನುರಾಧಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಹಾದೇವು, ಉಪನ್ಯಾಸಕರಾದ ರವಿ, ಸೋಮಣ್ಣ, ಶ್ರೀನಿವಾಸ್, ಮಹಾಂತೇಶ್, ಪುಟ್ಟೇಗೌಡ, ಎಚ್.ಎಂ.ಮಹೇಶ್, ರಾಕೇಶ್ ಇತರರಿದ್ದರು.