ಕಿಕ್ಕೇರಿಯಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರದಿಂದ ಶುಕ್ರವಾರ ಆರಂಭವಾದ ಮಕ್ಕಳ ಅಕ್ಕರೆಯ ಬೇಸಿಗೆ ಶಿಬಿರಕ್ಕೆ ನೋಡಲ್ ಅಧಿಕಾರಿ ಬಿ.ಪಿ. ರಾಕೇಶ್ ಚಾಲನೆ ನೀಡಿದರು. ಚಲುವರಾಜು, ಮಮತಾ ಮತ್ತಿತರರಿದ್ದರು.
ಕಿಕ್ಕೇರಿ : ಕೇವಲ ಓದು, ಅಂಕಗಳಿಕೆಗೆ ಒತ್ತು ನೀಡಿದಾಗ ಮಕ್ಕಳಲ್ಲಿ ಜಡತ್ವ ಮೂಡಲಿದ್ದು, ಬೇಸಿಗೆ ಶಿಬಿರ ಮನಸ್ಸಿಗೆ ಉಲ್ಲಾಸ ನೀಡಲಿದೆ ಎಂದು ಕಿಕ್ಕೇರಿ ಗ್ರಾಪಂ ನೋಡಲ್ ಅಧಿಕಾರಿ ಬಿ.ಪಿ. ರಾಕೇಶ್ ಹೇಳಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಿಂದ ಏರ್ಪಡಿಸಿರುವ ಗ್ರಾಮೀಣ ಮಕ್ಕಳಿಗೆ ಅಕ್ಕರೆಯ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು ಅವರು, ಗ್ರಾಮೀಣ ಮಕ್ಕಳಿಗೆ ಇಂತಹ ಶಿಬಿರ ಬಹಳ ಅವಶ್ಯಕತೆ ಇದೆ. ಸ್ಥಳೀಯ ಇತಿಹಾಸ, ಆಚಾರ, ವಿಚಾರ, ಸ್ಮಾರಕ ಮತ್ತಿತರ ಪರಿಚಯ ಸರಳವಾಗಿ ತಿಳಿಯಲಿದೆ. ಮನರಂಜನೆ, ಕಲಾತ್ಮಕ ಚಟುವಟಿಕೆ ವೃದ್ಧಿಸಲಿದೆ ಎಂದರು.
ಪಿಡಿಒ ಚಲುವರಾಜು ಮಾತನಾಡಿ, 34 ದಿನ ನಡೆಯುವ ಶಿಬಿರ ಭಾನುವಾರ ಹೊರತುಪಡಿಸಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಡೆಯಲಿದೆ. ಬಣ್ಣಗಳ ಪರಿಚಯ, ದೇಶಿ ಕ್ರೀಡೆ, ಭಾಷಾ ಆಟಗಳಲ್ಲಿ ಪದಗಳನ್ನು ಕಟ್ಟುವುದು, ಅಂತ್ಯಾಕ್ಷರಿ, ಗಟ್ಟಿಯಾಗಿ ಓದುವುದು, ನೀಸರ್ಗ ವೀಕ್ಷಣೆ, ಓರಿಗಾಮೆ, ಮೋಜಿನ ಗಣಿತ, ಕಸದಿಂದ ರಸ, ಚಿತ್ರಕಲೆ, ಹಾಡು, ನೃತ್ಯ, ಅಭಿನಯ ಗೀತೆ, ಕೋಲಾಟ, ನಾಟಕ, ಮೌಲ್ಯ ಶಿಕ್ಷಣ, ಹಗ್ಗ ಜಗ್ಗಾಟ, ಪರಿಸರ, ಸಾಮಾಜಿಕ ಕಾಳಜಿ ಮತ್ತಿತರ ಚಟುವಟಿಕೆಗಳ ಮೂಲಕ ಮಕ್ಕಳ ಸೂಪ್ತ ಪ್ರತಿಭೆಗಳನ್ನು ಎಕ್ಕಿ ತೆಗೆಯಲು ವಿಶೇಷ ಪ್ರಯತ್ನವಾಗಿದೆ. ಪೋಷಕರು ಮಕ್ಕಳನ್ನು ಶಿಬಿರಕ್ಕೆ ಕಳಿಸಿ ಮಕ್ಕಳ ಮನೋವಿಕಸನಕ್ಕೆ ಮುಂದಾಗಿ ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಮಮತಾ ಮಾತನಾಡಿ, 5ರಿಂದ 8ನೇ ತರಗತಿ ಮಕ್ಕಳಿಗಾಗಿ ಶಿಬಿರ ಇದೆ. ವಿಶೇಷವಾಗಿ ಮಕ್ಕಳಿಗೆ ಸ್ಥಳೀಯ ಇತಿಹಾಸ, ಕೋಟೆ, ಕೊತ್ತಲ, ದೇಗುಲ ವೀಕ್ಷಣೆ ಪರಿಚಯ ಶಿಬಿರದಿಂದ ತಿಳಿಯಬಹುದಾಗಿದೆ. ಸಂಪನ್ಮೂಲ ವ್ಯಕ್ತಿಗಳು ನಿತ್ಯ ಹೊಸ ವಿಷಯಗಳ ಪರಿಚಯ ಮಾಡುವುದರಿಂದ ಮಕ್ಕಳಿಗೆ ರಂಜನೆ ಜತೆ ಮನೋವಿಕಸನವಾಗಲಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಕೆರೆಕಟ್ಟೆಗಳಲ್ಲಿ ಈಜಲು ಹೋಗಿ ಅವಘಡಗಳು ಸಂಭವಿಸುತ್ತಿವೆ. ಪಾಲಕರು ಜಾಗೃತಿಯಿಂದ ಮಕ್ಕಳನ್ನು ನೀರಿನ ಸೆಲೆ, ಕೆರೆ, ನಾಲೆ, ಹಳ್ಳಗಳ ಬಳಿ ಕಳಿಸಿದಂತೆ ಎಚ್ಚರಿಕೆ ವಹಿಸಿ ಶಿಬಿರಕ್ಕೆ ಕಳಿಸಿ ಎಂದು ತಿಳಿ ಹೇಳಿದರು.
ಗ್ರಂಥಾಲಯ ಮೇಲ್ವಿಚಾರಕ ಲೋಕೇಶ್, ಸ್ವಯಂ ಸೇವಕರು ಹಾಜರಿದ್ದರು.