ಶ್ರೀರಂಗಪಟ್ಟಣದ ಪರಿವರ್ತನಾ ವಸತಿ ಶಾಲೆ ಹಾಗೂ ಪಿ.ಯು.ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾನು ಸಾಧಿಸುವೇ ಪ್ರೇರಣಾ ಕಾರ್ಯಾಗಾರವನ್ನು ಕೆ.ಆರ್.ನಂದಿನಿ ಉದ್ಘಾಟಿಸಿದರು. ಜಿ.ಲೋಕೇಶ್, ಬಿ.ವಿ.ನಂದೀಶ್, ಲಿಂಗಣ್ಣ ಇದ್ದರು.
- ಜಿಪಂ ಸಿಇಒ ಕೆ.ಆರ್. ನಂದಿನಿ ಸಲಹೆ
ಶ್ರೀರಂಗಪಟ್ಟಣ : ವಿದ್ಯಾರ್ಥಿಗಳು ತಮ್ಮೊಳಗಿನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಭರವಸೆಯಿಂದ ಮುಂದಿನ ಗುರಿಯ ಕಡೆ ಆಲೋಚಿಸಿ ಅಭ್ಯುದಯಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್. ನಂದಿನಿ ಹೇಳಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಚೆಕ್‌ಪೋಸ್ಟ್ ಬಳಿಯ ಪರಿವರ್ತನಾ ವಸತಿ ಶಾಲೆ ಹಾಗೂ ಪಿ.ಯು.ಕಾಲೇಜಿನಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ನಾನು ಸಾಧಿಸುವೇ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಈ ವಯೋಮಾನದಲ್ಲಿ ತಮ್ಮ ಗಮನವನ್ನು ಇತರ ವಿಚಾರ ಹಾಗೂ ಸಾಮಾಜಿಕ ಜಾಲತಾಣಗಳೆಡೆ ದಿಕ್ಕುತಪ್ಪಲು ಬಿಡದೆ ಏಕಾಗ್ರತೆಯಿಂದ ಶಿಕ್ಷಣವನ್ನು ಪಡೆಯಬೇಕಿದೆ. ಇದು ನಿಮ್ಮ ಉಜ್ವಲ ಭವಿಷ್ಯತ್ತಿನ ದಿಕ್ಸೂಚಿಯಾಗಿ ಪರಿವರ್ತಿಸಿಕೊಳ್ಳಬೇಕು. ಪಬ್ಲಿಕ್ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಸಮಾಜಕ್ಕೆ ಮಾದರಿಯಾಗುವಂತೆ ಶಿಕ್ಷಕರು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು. ಶಿಕ್ಷಕರ ಸಾರ್ಥಕತೆಗೆ ನಿಮ್ಮ ಆಸಕ್ತಿ ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳಿಂದ ಶಾಲೆಗೆ ಒಳ್ಳೆಯ ಫಲಿತಾಂಶವನ್ನು ನೀಡುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ.ವಿ.ನಂದೀಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ ಲಿಂಗಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಇಸಿಒ ಬಿ.ಕೆ.ಪ್ರತಿಮಾ, ಪರಿವರ್ತನ ಹಾಗೂ ಓಂಶ್ರೀನಿಕೇತನ ಸಂಸ್ಥೆಯ ಮುಖ್ಯಸ್ಥರಾದ ಸಂಕ್ರಾಂತಿ ಉಪಸ್ಥಿತರಿದ್ದರು.