ಮಂಡ್ಯದಲ್ಲಿ ಆಯೋಜಿಸಿದ್ದ ದಾಖಲೆಗಳ ನಿರ್ವಹಣೆ ಕುರಿತು ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಉದ್ಘಾಟಿಸಿದರು.  
ಮಂಡ್ಯ

ದಾಖಲೆ ಸಂರಕ್ಷಣೆ ಅಧಿಕಾರಿಗಳ ಜವಾಬ್ದಾರಿ: ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಕಚೇರಿಯಲ್ಲಿ ಕಾರ್ಯಾಗಾರ
  • ಜಿಲ್ಲಾಧಿಕಾರಿ ಕಾರ್ಯಾಲಯ, ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆ, ವಿಭಾಗೀಯ ಪತ್ರಾಗಾರ ಕಚೇರಿಯಿಂದ ಆಯೋಜನೆ
ಮಂಡ್ಯ: ಸಾರ್ವಜನಿಕ ದಾಖಲೆ ನಿರ್ವಹಣೆ ಹಾಗೂ ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಸಾರ್ವಜನಿಕರಿಗೆ ಅವಶ್ಯಕವಾದ ದಾಖಲೆ ಸರಿಯಾದ ಸಮಯದಲ್ಲಿ ನೀಡುವುದು ಮತ್ತು ಮೂಲ ದಾಖಲೆಗಳನ್ನು ಸಂರಕ್ಷಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯ, ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆ, ವಿಭಾಗೀಯ ಪತ್ರಾಗಾರ ಕಚೇರಿ ಮೈಸೂರು ಸಹಯೋಗದೊಂದಿಗೆ ಆಯೋಜಿಸಿದ್ದ ಸಾರ್ವಜನಿಕ ದಾಖಲೆಗಳ ಅಧಿನಿಯಮ ಮತ್ತು ದಾಖಲೆಗಳ ನಿರ್ವಹಣೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸುವುದು ಮತ್ತು ವಿಲೇವಾರಿ ಮಾಡುವುದು. ಸಾರ್ವಜನಿಕ ಅಧಿನಿಯಮದಡಿ ಅವುಗಳ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ದಾಖಲೆಗಳು ಕೇವಲ ಕಾಗದಗಳಲ್ಲ. ಅವುಗಳು ಇತಿಹಾಸ ಮತ್ತು ಆಡಳಿತದ ಸಾಕ್ಷ್ಯಗಳಾಗಿದ್ದು, ದಾಖಲೆಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಜವಾಬ್ದಾರಿ. ಪ್ರಸ್ತುತ ದಿನಗಳಲ್ಲಿ ಎಲ್ಲ ದಾಖಲೆಗಳು ಡಿಜಿಟಲೀಕರಣಗೊಳ್ಳುತ್ತಿರುವುದರಿಂದ ಹಳೆಯ ದಾಖಲೆಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇಲಾಖೆವಾರು ಅಧಿಕಾರಿ ಹಾಗೂ ಕಚೇರಿ ಸಿಬ್ಬಂದಿ ಕಾರ್ಯಾಗಾರವನ್ನು ಅರ್ಥೈಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಂಡು ದಾಖಲೆಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಈ ಕಾರ್ಯಾಗಾರದಲ್ಲಿ ಪಾಲ್ಗೊಂಡು ದಾಖಲೆಗಳ ಸಂರಕ್ಷಣೆಯಲ್ಲಿ ಎದುರಿಸುತ್ತಿರುವ ತಾಂತ್ರಿಕ ಸವಾಲುಗಳ ಕಾರ್ಯಾಗಾರದ ಉದ್ದೇಶ ಮತ್ತು ಇದರಿಂದ ಸರ್ಕಾರಿ ಕಚೇರಿಗಳಲ್ಲಿ ಆಗುವ ಸುಧಾರಣೆಗಳ ಬಗ್ಗೆ ಬೆಳಕು ಚೆಲ್ಲಿದರು. ಡಿಜಿಟಲೀಕರಣದ ಈ ಕಾಲದಲ್ಲಿ ಹಳೆಯ ದಾಖಲೆಗಳನ್ನು ಹೇಗೆ ಸಂರಕ್ಷಿಸಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಉಪ ನಿರ್ದೇಶಕ ಎಚ್.ಎಲ್.ಮಂಜುನಾಥ್, ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ಜಂಟಿ ನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದಪ್ಪ, ತಹಸೀಲ್ದಾರ್‌ಗಳಾದ ವಿಶ್ವನಾಥ್, ಚೇತನಾ ಯಾದವ್, ಲೋಕೇಶ್, ಅಶೋಕ್, ಪರಶುರಾಮ್ ಸತ್ತಿಗೇರಿ, ಜಿಪಂ ಯೋಜನಾಧಿಕಾರಿ ಧನುಷ್ ಇತರರಿದ್ದರು.