ಹಲಗೂರು: ಖಾಸಗಿ ಕ್ಲಿನಿಕ್ ವೈದ್ಯರೊಬ್ಬ ವಿಷ ಕುಡಿದು ಮೃತಪಟ್ಟಿದ್ದು, ಸಮೀಪದ ಮುತ್ತತ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಮಾಕನಹಳ್ಳಿ ಗ್ರಾಮದ ಸುರೇಂದ್ರ ಅವರ ಪುತ್ರ ಡಾ.ರಕ್ಷಿತ್ (28) ಮೃತ.
ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಖಾಸಗಿ ಕ್ಲಿನಿಕ್‌ನಲ್ಲಿ ವೈದ್ಯರಾಗಿದ್ದ ರಕ್ಷಿತ್ ಮಂಗಳವಾರ ನಾಪತ್ತೆಯಾಗಿದ್ದರು. ಈ ಸಂಬಂಧ ತಾಯಿ ಅನ್ಮಪೂರ್ಣಮ್ಮ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಶುಕ್ರವಾರ ಬೆಳಗ್ಗೆ ಮುತ್ತತ್ತಿ ಬಳಿಯ ಅರಣ್ಯ ಇಲಾಖೆ ವಸತಿ ಗೃಹದ ಕೂಗಳತೆ ದೂರದಲ್ಲಿ ಅವರ ಬೈಕ್ ಪತ್ತೆಯಾಗಿದೆ. ಸುಳಿವು ಹಿಡಿದ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧಿಸಿದಾಗ ರಕ್ಷಿತ್ ಮೃತದೇಹ ಪತ್ತೆಯಾಗಿದೆ. ಪಕ್ಕದಲ್ಲೇ ವಿಷದ ಬಾಟಲಿ ಮತ್ತು ಬೈಕ್ ಕೀ ದೊರೆತಿದೆ. ಸಾವಿಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.