ಮಂಡ್ಯ ನಗರದ ಆರ್‌ಸೆಟಿ ಸಭಾಂಗಣದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್‌ಕುಮಾರ್, ಆರ್‌ಬಿಐನ ವ್ಯವಸ್ಥಾಪಕಿ ವಿಜಯಶ್ರೀ, ನಬಾರ್ಡ್ ವ್ಯವಸ್ಥಾಪಕಿ ಹರ್ಷಿತಾ ಇದ್ದರು. 
ಮಂಡ್ಯ

ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಬೇಡಿ: ತರಾಟೆ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು Do not force debt collection.

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಬೇಡಿ
  • ತರಾಟೆ ತೆಗೆದುಕೊಂಡಿದ್ದ ಕೇಂದ್ರ ಸಚಿವ ಮತ್ತು ಶಾಸಕ
  • ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತ್ತೊಮ್ಮೆ ಸೂಚನೆ
ಮಂಡ್ಯ: ಕೃಷಿಗಾಗಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದುಕೊಳ್ಳುವ ರೈತರು ಅನಿವಾರ್ಯ ಕಾರಣಕ್ಕೆ ಮರು ಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ. ಆದರೆ ಇದನ್ನೇ ನೆಪ ಮಾಡಿಕೊಂಡು ಕೆಲ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ರೈತರಿಗೆ ಕಿರುಕುಳ ನೀಡುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ದಿಶಾ ಸಮಿತಿ ಸಭೆಯಲ್ಲಿಯೂ ಗಂಭೀರ ಚರ್ಚೆ ನಡೆದಿತ್ತು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ ಇನ್ನು ಮುಂದೆ ರೈತರಿಗೆ ಕಿರುಕುಳ ನೀಡಿದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಮಾಡುವ ಎಚ್ಚರಿಕೆ ನೀಡಲಾಗಿತ್ತು. ಇದರ ಬೆನಲ್ಲೇ ಜಿಪಂ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮಾತ್ರವಲ್ಲದೆ ಎಲ್ಲ ಬ್ಯಾಂಕ್‌ಗಳು ಸಾಲ ವಿತರಣೆ ಜತೆಗೆ ಜಿಲ್ಲೆಯ ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡಬೇಡಿ. ಆರ್‌ಬಿಐ ನಿಯಮಾವಳಿ ಪ್ರಕಾರ ಸಾಲ ವಸೂಲಾತಿಗೆ ಕ್ರಮ ವಹಿಸಿ ಎಂದು ಸಿಇಒ ಸೂಚನೆ ನೀಡಿದ್ದಾರೆ.
ನಗರದ ಬ್ಯಾಂಕ್ ಆಫ್ ಬರೋಡಾದ ಆರ್‌ಸೆಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.114ರಷ್ಟು ಪ್ರಗತಿ ಸಾಧಿಸಿರುವುದು ಉತ್ತಮ ಬೆಳವಣಿಗೆ. ಮುಂದಿನ ತ್ರೈಮಾಸಿಕದಲ್ಲೂ ಇದೇ ರೀತಿ ಸಾಲ ವಿತರಣೆಯಲ್ಲಿ ಪ್ರಗತಿ ಸಾಧಿಸಬೇಕು. ಅಂತೆಯೇ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಸುರಕ್ಷಾ ಬಿಮಾ ಯೋಜನೆಯಡಿ ಜಿಲ್ಲೆಯ ಎಲ್ಲ ವರ್ಗದ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಮೆ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಅರುಣ್‌ಕುಮಾರ್ ಮಾತನಾಡಿ, ಎರಡನೇ ತ್ರೈಮಾಸಿಕದಲ್ಲಿ ಆದ್ಯತಾ ವಲಯದ ಸಾಲ ವಿತರಣೆಯಲ್ಲಿ 7,121 ಕೋಟಿ ರೂ(ಶೇ.114ರಷ್ಟು) ಪ್ರಗತಿ ಸಾದಿಸಲಾಗಿದೆ. ಕೃಷಿ ವಲಯಕ್ಕೆ 5.610 ಕೋಟಿ ರೂ, ಕೈಗಾರಿಕಾ ವಲಯಕ್ಕೆ 884 ಕೋಟಿ ರೂ ಹಾಗೂ ಇತರೆ ಸೇವಾ ವಲಯಕ್ಕೆ 627 ಕೋಟಿ ರೂ ಸಾಲವನ್ನು ನೀಡಲಾಗಿದೆ ಎಂದ ಅವರು, ಸರ್ಕಾರದ ವಿವಿಧ ಇಲಾಖೆಗಳ ಸಾಲದ ಯೋಜನೆಗೆ ನೀಡಿರುವ ಸಾಲದ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆರ್‌ಬಿಐನ ವ್ಯವಸ್ಥಾಪಕಿ ವಿಜಯಶ್ರೀ, ನಬಾರ್ಡ್ ವ್ಯವಸ್ಥಾಪಕಿ ಹರ್ಷಿತಾ ಸೇರಿದಂತೆ ವಿವಿಧ ಬ್ಯಾಂಕಿನ ಅಧಿಕಾರಿಗಳು ಇದ್ದರು.