ಕಿಕ್ಕೇರಿ ಗ್ರಾಪಂ ಕಚೇರಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ ಕಡತ ಪರಿಶೀಲಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಸುಂದರ್‌ರಾಜ್, ಸುಷ್ಮಾ ಮತ್ತಿತರರಿದ್ದರು. 
ಮಂಡ್ಯ

ಇ-ಸ್ವತ್ತು ನೀಡಲು ವಿಳಂಬ ಮಾಡಬೇಡಿ

ಕಿಕ್ಕೇರಿ: ಗ್ರಾಮ ಪಂಚಾಯಿತಿಗಳ ಆಡಳಿತಾತ್ಮಕ ಕಾರ್ಯನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮೊದಲು ಆದ್ಯತೆ ನೀಡಿ ಎಂದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ತಿಳಿಸಿದರು.
ಇಲ್ಲಿನ ಗ್ರಾಪಂ ಕಚೇರಿಗೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಕಚೇರಿಯಲ್ಲಿನ ವಿವಿಧ ದಾಖಲೆ, ಕಡತಗಳು, ಕಾರ್ಯನಿರ್ವಹಣೆ ಪರಿಶೀಲಿಸಿ ಮಾತನಾಡಿ, ಗ್ರಾಪಂನಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುತ್ತಿವೆ. ಸಾರ್ವಜನಿಕರಿಂದ ದೂರುಗಳ ಸುರಿಮಳೆ ಇದೆ. ಮೊದಲು ಸರಿಪಡಿಸಿಕೊಳ್ಳಿ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ. ಇ-ಸ್ವತ್ತು ನೀಡಲು ತಡ ಮಾಡಬೇಡಿ. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ತ್ವರಿತವಾಗಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದರು.
ವಿಬಿ ಜಿ ರಾಮ್ ಜಿ ಯೋಜನೆಯಡಿ ಸಕ್ರಿಯವಾಗಿ ಜಾಬ್ ಕಾರ್ಡ್‌ಗಳ ಮಾಹಿತಿ ಪಡೆದು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿಕೊಡಿ. ಗ್ರಾಪಂನಲ್ಲಿನ ಬಿಲ್‌ಕಲೆಕ್ಟರ್ ನೇಮಕಾತಿ ಪ್ರಕರಣ ನ್ಯಾಯಾಲಯದಲ್ಲಿದ್ದು ನಿಯಮಾನುಸಾರ ಹಾಜರಾತಿ ತೆಗೆದುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜಿಪಂ ಯೋಜನಾ ನಿರ್ದೇಶಕ ಸುಂದರ್‌ರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ, ಪಿಡಿಒ ಚಲುವರಾಜು ಮತ್ತಿತರರಿದ್ದರು.