ಮಳವಳ್ಳಿ ಪಟ್ಟಣದಲ್ಲಿ ಆಯೋಜನಗೊಂಡಿರುವ ಶ್ರೀ ಶಿವರಾತ್ರೀಶ್ವರ ಜಯಂತೋತ್ಸವ ಶನಿವಾರದ ವೇದಿಕೆ ಕಾರ್ಯಕ್ರಮವನ್ನು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪಿ.ಎಂ. ನರೇಂದ್ರಸ್ವಾಮಿ, ಮರಿತಿಬ್ಬೇಗೌಡ ಇದ್ದರು.  
ಮಂಡ್ಯ

ಸಮಾಜಕ್ಕೆ ಒಳಿತಾಗುವಂತ ಸತ್ಕಾರ್ಯ ಮಾಡಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳ ಗವಿ ಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಲಹೆ
ಮಳವಳ್ಳಿ: ಹಣ, ಆಸ್ತಿ, ಸಂಪತ್ತು ಎಷ್ಟೇ ಇದ್ದರೂ ಕೂಡ ಒಂದಲ್ಲಾ ಒಂದು ಚಿಂತೆಯಲ್ಲಿಯೇ ಮನುಷ್ಯರು ಬದುಕು ಸಾಗಿಸುತ್ತಿದ್ದು, ಸಂತೋಷದಿಂದ ಬದುಕುತ್ತಿರುವವನೇ ಯಶಸ್ವಿ ಪುರುಷ ಎನ್ನುವ ಸತ್ಯವನ್ನು ಅರಿತು ಬದುಕಬೇಕೆಂದು ಕೊಪ್ಪಳ ಗವಿ ಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತ್ಯುತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೀಪವೇ ಇಲ್ಲದ ಗುಡಿಸಲಿನಲ್ಲಿ ವಿದ್ಯೆ ಎಂಬ ದೀಪ ಹಚ್ಚಿ ಬೆಳಕು ನೀಡುವುದರ ಜತೆಗೆ ಬಡವರ ಮಕ್ಕಳಿಗೆ ಅರಿವಿನ ಮನೆ ಕಟ್ಟಿದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳು ಸಮಾಜದಲ್ಲಿ ಶಾಶ್ವತ ದೇವರಾಗಿ ಉಳಿದಿದ್ದಾರೆ. ಏನು ಮಾಡದ ಮನುಷ್ಯ ದೀಪ ಆರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾನೆ. ಆದರೆ ಶತ ಶತಮಾನಗಳ ಹಿಂದೆ ಅಜ್ಞಾನವನ್ನು ಹೋಗಲಾಡಿಸಲು ಜ್ಞಾನ ನೀಡಿ ಹಸಿದ ಹೊಟ್ಟೆಗೆ ಅನ್ನ ನೀಡಿದ ಶಿವರಾತ್ರೀಶ್ವರರ ಹುಟ್ಟುಹಬ್ಬವನ್ನು ನಿತ್ಯ ಕಾರ್ತಿಕೋತ್ಸವವಾಗಿ ಆಚರಿಸಲಾಗುತ್ತಿದೆ ಎಂದರು.
ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಬೆಂಗಳೂರು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಪಿ.ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ನಿರಂಜನ್ ಕುಮಾರ್, ನಾಗಮಣಿ ನಾಗೇಗೌಡ ಇದ್ದರು.