ಮಂಡ್ಯದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಕುಡಿಯುವ ನೀರಿಗೆ ವ್ಯತ್ಯಯವಾಗದಿರಲಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಗುಣಮಟ್ಟದ ನೀರು ಸರಬರಾಜು ಮಾಡಬೇಕು
  • ನಗರದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ
ಮಂಡ್ಯ: ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಪ್ರಮಾಣದ ಗುಣಮಟ್ಟದ ನೀರು ಸರಬರಾಜು ಮಾಡುವುದರ ಜತೆಗೆ ಯಾವುದೇ ವ್ಯತ್ಯಯವಾಗದಂತೆ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಸಮಸ್ಯೆ ಎದುರಾಗಬಹುದಾದ ಗ್ರಾಮಗಳಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗ್ರಾ.ಪಂ.ಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ವಹಿಸುವಂತೆ ಸೂಚಿಸಿದರು.
ತುರ್ತು ಅವಶ್ಯಕತೆ ಇರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಸಭೆ ಏರ್ಪಡಿಸಲಾಗಿದೆ. ಸರ್ಕಾರದಿಂದ ಅನುಮೋದನೆಯಾದ ಮೊತ್ತಕ್ಕೆ ಹಾಗೂ ತೆಗೆದುಕೊಳ್ಳಬಹುದಾದ ಕಾಮಗಾರಿಗಳಿಗೆ ಮಾತ್ರ ನಿಯಮಾನುಸಾರ ಅನುಮೋದನೆ ಪಡೆಯಬೇಕು. ತುರ್ತು ಅವಶ್ಯಕತೆ ಇರುವ ಕಾಮಗಾರಿಗಳ ಪೈಕಿ ಜಲ ಜೀವನ ಮಿಷನ್ ಯೋಜನೆಯಡಿ ಸೇರ್ಪಡೆಯಾಗದಿರುವ ಕಾಮಗಾರಿಗಳಾದ ಒಎಚ್‌ಟಿ ರಿಪೇರಿ, ಲ್ಯಾಡರ್ ಅಳವಡಿಸುವುದು, ಫೆನ್ಸಿಂಗ್ ಹಾಕಿಸುವುದು, ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿ, ಬಲ್ಕ್ ಮೀಟರ್ ಅಳವಡಿಸುವುದು, ಬೋರ್‌ವೆಲ್‌ಗಳಿಗೆ ಕ್ಲೋರಿನೇಷನ್ ಘಟಕ ಅಳವಡಿಸುವುದು, ಎಲೆಕ್ಟ್ರೋಫ್ಯೂಷನ್ ಮಷಿನ್ ಖರೀದಿಯಂತಹ ಚಟುವಟಿಕೆಗೆ ಅನುದಾನ ನಿಗದಿಗೊಳಿಸಲಾಗಿದೆ. ಈ ಚಟುವಟಿಕೆಯನ್ನು ನಿಯಮಾನುಸಾರ ಅನುಷ್ಠಾನ ಮಾಡಬೇಕು ಎಂದರು.
ತಾಲೂಕು ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ಪಾಂಡವಪುರ ತಾಲೂಕಿನ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯವನ್ನು ಮೇಲ್ದರ್ಜೆಗೇರಿಸಲು ಅನುಮತಿ ದೊರೆತಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಕಾಮಗಾರಿ ಪೂರ್ಣಗೊಳಿಸಬೇಕು. ಬೇಸಿಗೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಎಲ್ಲ ತಾಪಂ ಇಒ, ತಹಸೀಲ್ದಾರ್ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಮನ್ವಯ ಸಭೆ ನಡೆಸಿ. ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಗ್ಗೆ ಎಸ್‌ಒಪಿಯಂತೆ ಪರಿಶೀಲನೆ ಮಾಡಲು ಈ ಹಿಂದೆಯೇ ಸೂಚಿಸಲಾಗಿತ್ತು. ಅದರಂತೆ ಎಲ್ಲ ಎಂವಿಎಸ್ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಗ್ಗೆ ಇಂಜಿನಿಯರ್ ಖುದ್ದು ಪರಿಶೀಲಿಸಿ, ನ್ಯೂನ್ಯತೆಗಳಿದ್ದಲ್ಲಿ ಸರಿಪಡಿಸಲು ಕ್ರಮವಹಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ತುರ್ತು ಕ್ರಮ ವಹಿಸಿ ರಿಪೇರಿ ಮಾಡಿಸಿ ಘಟಕವನ್ನು ಚಾಲನೆಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ಎನ್.ಜಿ.ಪ್ರಮೋದ್‌ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ರಶ್ಮಿ, ಮಮತಾ, ಸುಷ್ಮಾ, ಗಿರಿಜೇಶ್, ಮಧುಸೂದನ್ ಇತರರಿದ್ದರು.