ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಕಾರ್ಯಪಡೆ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಗೈರಾದ ಮಕ್ಕಳ ಮಾಹಿತಿ ಪರಿಶೀಲಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಜಿಲ್ಲಾಮಟ್ಟದ ಕಾರ್ಯಪಡೆ ಸಭೆ
  • ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿ
ಮಂಡ್ಯ: ಬಾಲಕಾರ್ಮಿಕ, ಕಿಶೋರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಪತ್ತೆಹಚ್ಚಿ ಅವರಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ನಿರಂತರ ಗೈರು ಹಾಜರಾತಿಯಾದ ಮಕ್ಕಳ ಮಾಹಿತಿ ಪಡೆದು ನಂತರ ಅವರ ಪಾಲಕರನ್ನು ಭೇಟಿ ಮಾಡಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ ಕಾಯ್ದೆ) 1986, ನಿಯಮಗಳು 2017(ಕೇಂದ್ರ/ರಾಜ್ಯ)ಗಳ ಕುರಿತು ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 14 ವರ್ಷದೊಳಗಿನ ಮಕ್ಕಳು ಗ್ಯಾರೇಜ್, ಹೋಟೆಲ್, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಿ ಮಾಲೀಕರ ಮೇಲೆ ಕಾನೂನು ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯಡಿ 2025 ಏಪ್ರಿಲ್ನಿಂದ 2026 ಮಾರ್ಚ್‌ವರೆಗೆ ಅಧಿಕಾರಿಗಳು 951 ಕಡೆ ತಪಾಸಣೆ ಮಾಡಿದ್ದಾರೆ. ಅಂತೆಯೇ 40 ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಲಾಗಿದೆ. 14 ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. 26 ಪ್ರಕರಣಗಳು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ದಾಖಲಾಗಿವೆ. ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಕುರಿತು ತಾಲೂಕು ಮಟ್ಟದಲ್ಲಿ ಅರಿವು ಕಾರ್ಯಕ್ರಮ ಮಾಡಬೇಕು. ಹಾಗೂ ಕಿಶೋರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಪತ್ತೆ ಮಾಡಿ. ಅವರಿಗೆ ಕೌನ್ಸೆಲಿಂಗ್ ಮಾಡಿ ಉತ್ತಮ ಶಿಕ್ಷಣ ನೀಡುವುದರ ಜತೆ ಕೌಶಲ ತರಬೇತಿ ಸಹ ನೀಡಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಟಾಸ್ಕ್‌ಪೋರ್ಸ್ ಸಮಿತಿ ಸಭೆ ಮಾಡಬೇಕು. ಹಾಗೂ ನಿರಂತರವಾಗಿ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಮತ್ತು ಬಾಲ್ಯ ವಿವಾಹ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಬೇಕು. 2025-26ನೇ ಸಾಲಿನಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು 9 ಬೀದಿ ನಾಟಕ, 7,000 ಕರಪತ್ರ, 22 ಗೋಡೆ ಬರಹ, 6 ಗ್ರಾಮ ಪಂಚಾಯಿತಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಡಾ.ಸವಿತಾ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಪ್ರಭಾಕರ್, ರಾಜ್ಯ ಸಂಚಾಲಕರಾದ ಬಿನು ವರ್ಗೀಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ಹಿಂದುಳಿದ ವರ್ಗಗಳ ಇಲಾಖೆಯ ಉಪನಿರ್ದೇಶಕಿ ಮಂಜುಳಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ನಗರಸಭೆಯ ಪರಿಸರ ಇಂಜಿನಿಯರ್ ರುದ್ರೇಗೌಡ, ಡಿಡಿಪಿಐ ಲೋಕೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಆಶಾ ಉಪಸ್ಥಿತರಿದ್ದರು.