ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ತತ್ವಪದಗಾರ ಗೊರವಾಲೆ ರುದ್ರಪ್ಪ ಅವರನ್ನು ಅಭಿನಂದಿಸಲಾಯಿತು.
- ಜಿಲ್ಲಾಮಟ್ಟದ ತತ್ವಪದಗಾರರ ಸಂಗಮ ಕಾರ್ಯಕ್ರಮ
- ಗೊರವಾಲೆ ರುದ್ರಪ್ಪ ಅಭಿನಂದನಾ ಸಮಿತಿಯಿಂದ ಆಯೋಜನೆ
ಮಂಡ್ಯ: ರಾಜ್ಯದ ಎಲ್ಲ ಮಠದಲ್ಲಿಯೂ ತತ್ವಪದಗಳನ್ನು ಹಾಡಲು ಪ್ರೇರೇಪಿಸುವಂತಹ ಯೋಜನೆ ರೂಪಿಸಿ. ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯೋಣ ಎಂದು ಅಂತಾರಾಷ್ಟ್ರೀಯ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹೇಳಿದರು.
ನಗರದ ಗಾಂಧಿಭವನದಲ್ಲಿ ಗೊರವಾಲೆ ರುದ್ರಪ್ಪ ಅಭಿನಂದನಾ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ತತ್ವಪದಗಾರರ ಸಂಗಮ ಉದ್ಘಾಟಿಸಿ ಮಾತನಾಡಿದ ಅವರು, ತತ್ವಪದಗಳನ್ನು ಮಠಗಳಲ್ಲಿ ಪಲ್ಲಟಗೊಳಿಸುವ ಕೆಲಸ ಆಗಬೇಕು. ಕಾರಣ, ಜಾನಪದ ಗೀತೆಗಳು ಜನಪ್ರಿಯತೆ ಕಂಡಂತೆ ತತ್ವಪದಗಳು ಕಾಣಲಿಲ್ಲ ಎಂದರು.
ಇಂದಿನ ಕಾರ್ಯಕ್ರಮ ತತ್ವಪದಗಳ ಅನುಭವ ಮಂಟಪೋತ್ಸವದ ರೀತಿ ಭಾಸವಾಗುತ್ತಿದೆ. ಜಿಲ್ಲೆಯಲ್ಲಿಯೇ ಇದು ಪ್ರಥಮ ತತ್ವಪದದ ಬಸವಣ್ಣನವರ ಅನುಭವ ಮಂಟಪದ ವೇದಿಕೆಯಾಗಿದೆ. ಗೊರವಾಲೆ ರುದ್ರಪ್ಪ ಅವರು ತತ್ವಪದ ಕ್ಷೇತ್ರಕ್ಕೆ ಮೀಸಲಾಗಿದ್ದು, ಈ ಬಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು. ಅಂತೆಯೇ ತತ್ವಪದಕಾರರನ್ನು ಮರೆಯಬಾರದು, ತತ್ವಗೀತೆಗಳನ್ನು ಹಾಡುವುದಕ್ಕೆ ಯುವಕ ಮತ್ತು ಯುವತಿಯರು ಹೆಚ್ಚು ಕಲಿಯಲು ಬರಬೇಕು. ಮನೆಯಲ್ಲಿ ತತ್ವಪದಗಳ ಅಭ್ಯಾಸ ನಡೆಯಬೇಕು. ಪ್ರಸ್ತುತದಲ್ಲಿ ಟಿವಿಯಲ್ಲಿ ಬರುವ ಸನ್ನಿವೇಶಗಳನ್ನು ನೋಡುವುದಾದರೆ ಏನು ನೋಡಬೇಕೋ ಅದನ್ನು ನೋಡುತ್ತಿಲ್ಲ. ಏನು ಕೇಳಬೇಕೋ ಅದನ್ನು ಕೇಳುತ್ತಿಲ್ಲ. ಇದು ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಗ್ರಾಮೀಣ ಕಲಾವಿದರು ಒಂದೆಡೆ ಸೇರಬೇಕು. ತತ್ವಪದ ಎಂದರೆ ಅರ್ಥ ತಿಳಿದುಕೊಳ್ಳಬೇಕು. ಒಂದು ನೀತಿ, ಬದುಕಿನ ಬಗೆಗೆ ಯಾವರೀತಿ ಬದುಕಬೇಕೆನ್ನುವ ಪ್ರಕಾರ ಅಡಗಿದೆ. ಜತೆಗೆ ಭಗವಂತನನ್ನು ಕಾಣುವ ರೀತಿಯಾಗಿದೆ. ಅಕ್ಕಮಹಾದೇವಿ, ಬಸವಣ್ಣನವರನ್ನು ನೋಡಿದರೆ ಅಥವಾ ಈ ತತ್ವಪದಗಳ ಮೂಲಕ ಕೇಳಿದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು ತಿಳಿಸಿದರು.
ಲಯನ್ಸ್‌ನ ಮಾಜಿ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಡಾ.ಕೃಷ್ಣೇಗೌಡ ಮಾತನಾಡಿ, ತತ್ವಪದ ಪ್ರಯೋಗ, ಪ್ರವಾಹವನ್ನು ಸಮಾಜದಲ್ಲಿ ನೆನಪು ಮಾಡಬೇಕು. ಇದು ಸರಮಾಲೆ ರೀತಿ ಮುಂದುವರಿಯಲು ಈ ತತ್ವಪದ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಸಮಾಜದಲ್ಲಿ ಯಾವುದೇ ವಿದ್ಯೆ ಇಲ್ಲದಿದ್ದರೂ ಸಮಾಜವನ್ನು ತಿದ್ದುವ, ದೇವರ ನೆನಪು ಮಾಡುವ ಶುಭಸಮಾರಂಭಗಳಲ್ಲಿ ತತ್ವಪದದಲ್ಲಿ ಅರ್ಥ ಮತ್ತು ಗೂಡಾರ್ಥವಿದೆ. ಇದರ ಒಳಾರ್ಥವನ್ನು ಅರಿತುಕೊಳ್ಳಬೇಕು. ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ಅರಿತುಕೊಂಡು ನಡೆಯಬೇಕು. ಅದೇರೀತಿ ತತ್ವಪದ ಗಾಯಕರನ್ನು ಗೌರವಿಸುವ ಕೆಲಸ ಹಾಗೂ ಬೆಳೆಸುವ ಗುಣ ಎಲ್ಲರಲ್ಲಿಯೂ ಇರಬೇಕು ಎಂದು ಅಭಿಪ್ರಾಯಪಟ್ಟರು.
ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ, ಲಯನ್ಸ್ 2ನೇ ಉಪ ಪ್ರಾಂತಪಾಲ ಸಿದ್ದೇಗೌಡ, ಎಂಆರ್‌ಎಂ ಪ್ರಕಾಶನದ ಮುಖ್ಯಸ್ಥ ಮಂಜು ಮುತ್ತೇಗೆರೆ, ಜಾನಪದ ವಿವಿಯ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ಕನ್ನಡ ಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ್, ವಾಗ್ಮಿ ಯೋಗೇಶ್ ಅಪ್ಪಾಜಯ್ಯ, ಕಲಾವಿದರ ಪತ್ತಿನ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಸಮಿತಿಯ ಸಂಘಟಕ ಕಾರಸವಾಡಿ ಮಹದೇವ, ದ.ಕೋ.ಹಳ್ಳಿ ಚಂದ್ರಶೇಖರ್, ಎಂ.ವಿನಯ್‌ಕುಮಾರ್ ಇತರರಿದ್ದರು.
ಇದೇ ವೇಳೆ ತತ್ವಪದ ಗಾಯಕ ಗೊರವಾಲೆ ರುದ್ರಪ್ಪ ಅವರನ್ನು ಅಭಿನಂದಿಸಲಾಯಿತು. ಅಂತೆಯೇ 27 ತಂಡಗಳು ತತ್ವಪದ ಗಾಯನ ನಡೆಸಿಕೊಟ್ಟರು.