ಮಂಡ್ಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿದರು.
- ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಸಂಘಟನಾ ಕಾರ್ಯಾಗಾರ
- ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್ ವತಿಯಿಂದ ಆಯೋಜನೆ
ಮಂಡ್ಯ: ಕನಿಷ್ಟ ಕೂಲಿ ಪರಿಷ್ಕರಣೆ ಮಾಡದ ಸರ್ಕಾರ, ತಮ್ಮ ಸಚಿವರು ಮತ್ತು ಶಾಸಕರ ಸಂಬಳ ಹೆಚ್ಚು ಮಾಡಿಕೊಳ್ಳುತ್ತವೆ. ಆದರೆ ದುಡಿಯುವ ವರ್ಗಕ್ಕೆ ಕೂಲಿ ಹಣ ಹೆಚ್ಚು ಮಾಡಲು ಚರ್ಚೆ ಮಾಡಬೇಕೆನ್ನುತ್ತಾರೆ. ಒಟ್ಟಿನಲ್ಲಿ ಸರ್ಕಾರದ ಖಜಾನೆ ಹಣ ಇವರು ತಿನ್ನಬಹುದು. ಅದೇ ನಿಯತ್ತಾಗಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೊಡಲು ಕೂಲಿ ಹಣ ಇರುವುದಿಲ್ಲ ಎಂದು ಸಿಐಟಿಯು ಜಿಲ್ಲಾ ಸಮಿತಿ ಕಾರ್ಯದರ್ಶಿ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಸಂಘಟನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಕೇವಲ ಮನವಿಕೊಟ್ಟು ಸುಮ್ಮನೆ ಕೂರುವ ಜಾಯಮಾನದವರು ನಮ್ಮ ಕಾರ್ಮಿಕರಲ್ಲ. ಬದಲಿಗೆ ಒಗ್ಗಟ್ಟಿನಿಂದ ಹೋರಾಡಿ ನಮ್ಮ ಕಾರ್ಮಿಕರು ಹಕ್ಕನ್ನು ಪಡೆದುಕೊಳ್ಳುತ್ತಾರೆ. ಪ್ರಧಾನ ಮಂತ್ರಿ ಅವರು ಚಿನ್ನ ಖರೀದಿ ಮಾಡಬೇಡಿ ಎನ್ನುತ್ತಾರೆ. ಆದರೆ ನಮ್ಮ ಜನ ಅನ್ನ ಖರೀದಿ ಮಾಡಲೇ ಆಗುತ್ತಿಲ್ಲ. ಇನ್ನೂ ಚಿನ್ನ ಎಲ್ಲಿ ಖರೀದಿ ಮಾಡುತ್ತಾರೆ ಹೇಳಿ ಎಂದು ಪ್ರಶ್ನಿಸಿದರು.
ಐದು ವರ್ಷ ಸಚಿವರಾದವರಿಗೆ ಸಾಯೋತನಕ ಪಿಂಚಣಿ ಹಣ ಹಾಗೂ ಮರಣ ಹೊಂದಿದ ಮೇಲೂ ಹೆಂಡತಿ ಮಕ್ಕಳಿಗೆ ಸೌಲಭ್ಯವಿದೆ. ಆದರೆ, ಐವತ್ತು ವರ್ಷ ದುಡಿಯುವ ವರ್ಗಕ್ಕೆ ಪಿಂಚಣಿಯಿಲ್ಲ. ಸ್ಕೀಂನಲ್ಲಿ ದುಡಿಯುವ ವ್ಯಕ್ತಿಗಳಿಗೆ ಪಿಂಚಣಿ ಸಿಗುವುದೇ ಇಲ್ಲ. ಅಸಂಘಟಿತ ವಲಯಕ್ಕೂ ಭದ್ರತೆ ಇಲ್ಲ. ಸಾಮಾಜಿಕ ಮತ್ತು ಉದ್ಯೋಗ ಭದ್ರತೆಯು ಮತ ಹಾಕಿಸಿಕೊಳ್ಳುವವರಿಗೆ ಸಿಗುತ್ತಿದೆ. ಕನಿಷ್ಟ ಕೂಲಿ 33 ಸಾವಿರ ರೂ ಕೊಡಬೇಕೆಂದು ಕೇಳುತ್ತಿದ್ದೇವೆ ಎಂದರು.
ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಉಪಾಧ್ಯಕ್ಷೆ ಜಯಶೀಲಾ, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಮಹದೇವಮ್ಮ, ಪ್ರಮೀಳಾಕುಮಾರಿ, ಪುಟ್ಟಮ್ಮ, ಶ್ರೀನಿವಾಸ್ ಇತರರಿದ್ದರು.