ಮಂಡ್ಯದಲ್ಲಿ ಆಯೋಜಿಸಿದ್ದ ವಾತ್ಸಲ್ಯ ಕೇಂದ್ರದ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು. 
ಮಂಡ್ಯ

ವಾತ್ಸಲ್ಯಕೇಂದ್ರ ಆರಂಭಕ್ಕೆ ಸಿದ್ಧತೆ ಪೂರ್ಣವಾಗಲಿ: ಜಿ.ಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ
  • ನಗರದಲ್ಲಿ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸಭೆ

ಮಂಡ್ಯ:

ಗ್ರಾಮೀಣ ಮತ್ತು ಪೆರಿ-ಅರ್ಬನ್ ಪ್ರದೇಶಗಳ ದುಡಿಯುವ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿರುವ ವಾತ್ಸಲ್ಯ ಕೇಂದ್ರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.

ನಗರದ ಜಿಪಂ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಆಯೋಜಿಸಿದ್ದ ವಾತ್ಸಲ್ಯ ಕೇಂದ್ರದ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೆರಿ-ಅರ್ಬನ್ ಸುತ್ತಮುತ್ತ ಇರುವ ಗ್ರಾಮ ಪಂಚಾಯತಿಯಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕ ತಾಯಂದಿರು ನೆಮ್ಮದಿ ಮತ್ತು ಸಂತೃಪ್ತಿಯಿಂದ ಕೆಲಸ ನಿರ್ವಹಿಸಲು ಅವರ ಮಕ್ಕಳಿಗೆ ಪೂರಕ ಸುರಕ್ಷಿತ ವಾತಾವರಣವನ್ನು ಒದಗಿಸುವ ದೃಷ್ಟಿಯಿಂದಾಗಿ ಅವರ 3 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಹಾಗೂ 6 ರಿಂದ 14 ವರ್ಷದ ವಯೋಮಾನದ ಹೆಣ್ಣು ಮಕ್ಕಳ ಸುರಕ್ಷತೆಯ(ಶಾಲೆ ಮುಗಿದ ಕೂಡಲೇ) ದೃಷ್ಟಿಯಿಂದ ತಾತ್ಕಾಲಿಕವಾಗಿ ಆಶ್ರಯ ನೀಡುವ ಸಲುವಾಗಿ ಜಿಲ್ಲೆಯಲ್ಲಿ ಒಂದು ವಾತ್ಸಲ್ಯ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ವಾತ್ಸಲ್ಯ ಕೇಂದ್ರಗಳನ್ನು ನಡೆಸಲು ಆಯ್ಕೆ ಮಾಡಲಾದ ಸ್ವ-ಸಹಾಯ ಗುಂಪಿನ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಒಕ್ಕೂಟದ ಜವಾಬ್ದಾರಿಯಾಗಿರುತ್ತದೆ. ಅದರಂತೆ ಜಿಪಿಎಲ್ಎಫ್‌ಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ಸಂಬಂಧಪಟ್ಟ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಅಭಿಯಾನ ನಿರ್ವಹಣಾ ಘಟಕವು ಸುಗಮಗೊಳಿಸಬೇಕು ಎಂದು ತಿಳಿಸಿದರು.
ವಾತ್ಸಲ್ಯ ಕೇಂದ್ರದಲ್ಲಿ 3 ತಿಂಗಳಿಂದ 3 ವರ್ಷದ ಶಿಶುಗಳ ಪಾಲಕರು ಕೆಲಸಕ್ಕೆ ಹೋಗುವ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಡೇ ಕೇರ್ ಸೌಲಭ್ಯವನ್ನು ಒದಗಿಸಲಾಗುವುದು. ಅಂತೆಯೇ 6 ರಿಂದ 14 ವರ್ಷದ ವಿದ್ಯಾರ್ಥಿನಿಯರಿಗೆ ಶಾಲೆಯ ನಂತರದ ಪಾಲನೆ ಹಾಗೂ ಪಾಲಕರ ಅಗತ್ಯಕ್ಕೆ ತಕ್ಕಂತೆ ಪೂರ್ಣ ದಿನ, ಅರ್ಧ ದಿನ ಮತ್ತು ತುರ್ತು ಆರೈಕೆಯ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.
ಕೇಂದ್ರದ ನಿರ್ವಹಣೆಗೆ ಆಯ್ಕೆಯಾಗುವ ಸ್ವ-ಸಹಾಯ ಸಂಘದ ಮಹಿಳೆಯರು, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ವತಿಯಿಂದ ತರಬೇತಿ ಕಾರ್ಯಕ್ರಮ ಆಯೋಜಿಸಿ, ಸೈದ್ಧಾಂತಿಕ ವಿಷಯಗಳ ಜತೆಗೆ ಪ್ರಾಯೋಗಿಕ ತರಬೇತಿಗೂ ಆದ್ಯತೆ ನೀಡಲಾಗುವುದು. ಮಕ್ಕಳ ಸುರಕ್ಷತೆ, ಆರೋಗ್ಯ ತುರ್ತು ಪರಿಸ್ಥಿತಿಗಳ ನಿರ್ವಹಣೆ, ಪೌಷ್ಟಿಕ ಆಹಾರ ಸೇವನೆ, ಮಕ್ಕಳ ನಿರ್ವಹಣೆ ಹಾಗೂ ಕೇಂದ್ರದ ದೈನಂದಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಗತ್ಯ ಕೌಶಲ ಒದಗಿಸಲಾಗುವುದು ಎಂದು ತಿಳಿಸಿದರು.
ಕೇಂದ್ರಗಳಲ್ಲಿ ಮಕ್ಕಳ ವಯಸ್ಸು, ಸೇವೆಗಳ ಅವಧಿ ಹಾಗೂ ಚಟುವಟಿಕೆಗಳ ಆಧಾರದ ಮೇಲೆ ಬಳಕೆದಾರರ ಶುಲ್ಕ ನಿಗದಿಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಶುಲ್ಕ ನಿಗದಿಪಡಿಸುವ ವೇಳೆ ಚಟುವಟಿಕೆ ಆಧಾರಿತ, ಸಮಯ ಆಧಾರಿತ ಹಾಗೂ ವಯೋಮಾನದ ಆಧಾರಿತ ವಿಧಾನವನ್ನು ಅನುಸರಿಸಬೇಕು. ವಾತ್ಸಲ್ಯ ಕೇಂದ್ರ ಸ್ಥಾಪನೆಗೆ ಆಯ್ಕೆ ಮಾಡುವ ಕಟ್ಟಡಗಳು ರಚನಾತ್ಮಕವಾಗಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಇಒ, ಮಕ್ಕಳ ಸುರಕ್ಷತೆ, ಸ್ವಚ್ಛತೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಪರಿಗಣಿಸಿ ಸೂಕ್ತ ಸ್ಥಳಗಳನ್ನು ಅಂತಿಮಗೊಳಿಸುವಂತೆ ತಿಳಿಸಿದರು.
ಕೇಂದ್ರಗಳ ನಿರ್ವಹಣೆಗೆ ಅಗತ್ಯ ಸಿಬ್ಬಂದಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ತ್ವರಿತ ಪೂರ್ಣಗೊಳಿಸಿ. ಮುಂದಿನ ನಾಲ್ಕು ವಾರಗಳೊಳಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ತರಬೇತಿಯನ್ನು ಪೂರ್ಣಗೊಳಿಸಬೇಕು. ಸೆಪ್ಟೆಂಬರ್ ಮೊದಲ ವಾರದೊಳಗಾಗಿ ವಾತ್ಸಲ್ಯ ಕೇಂದ್ರದ ಉದ್ಘಾಟನೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಸುಂದರ್‌ರಾಜ್, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮೀ, ಡಯಟ್ ಪ್ರಾಂಶುಪಾಲ ಯೋಗೇಶ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಆಶಾಲತಾ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ಮಂಡ್ಯ ತಾಪಂ ಇಒ ಲೋಕೇಶ್‌ಮೂರ್ತಿ, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಕೆ.ಟಿ.ಕಿಶೋರ್ ಇತರರಿದ್ದರು.