ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಜನನ ಮತ್ತು ಮರಣ ಕುರಿತ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ಆಯೋಜಿಸಲಾಗಿತ್ತು.
- ನಕಲಿ ಪ್ರಮಾಣ ಪತ್ರ ನೀಡಿದರೆ ಶಿಸ್ತು ಕ್ರಮ
- 30 ದಿನಗಳೊಳಗಾಗಿ ಪ್ರಮಾಣ ಪತ್ರ ಮಾಡಿಸಲು ಮಾಹಿತಿ ಕೊಡಿ
- ಒಂದು ವರ್ಷ ಮೀರಿದರೆ ಕೋರ್ಟ್ ಮೊರೆ ಹೋಗಬೇಕು
ಮಂಡ್ಯ: ಜಿಲ್ಲೆಯಲ್ಲಿ ನಕಲಿ ಜನನ ಮತ್ತು ಮರಣ ಪತ್ರ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜನನ ಮತ್ತು ಮರಣ ಕುರಿತ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ಹಾಗೂ ಜಿಲ್ಲಾಮಟ್ಟದ ಬೆಳೆ ಕಟಾವು ಪ್ರಯೋಗ ಮತ್ತು ಕೃಷಿ ಅಂಕಿ ಅಂಶ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನನ ಮತ್ತು ಮರಣವನ್ನು ನೋಂದಣಿ ಮಾಡಲು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗೆ ಅಧಿಕಾರ ನೀಡಲಾಗಿದೆ. ಜನನ ಹಾಗೂ ಮರಣ ಸಂಭವಿಸಿದ 30 ದಿನಗಳೊಳಗಾಗಿ ಪ್ರಮಾಣ ಪತ್ರ ಮಾಡಿಸಿಕೊಳ್ಳಬಹುದು. ಇಲ್ಲವಾದಲ್ಲಿ 30 ದಿನ ಮೀರಿದರೆ ತಹಸೀಲ್ದಾರ್ ಅವರಿಂದ ಪಡೆಯಬೇಕು. ಒಂದು ವರ್ಷ ಮೀರಿದರೆ ಕೋರ್ಟ್ ಮೂಲಕ ಪ್ರಮಾಣ ಪತ್ರ ಪಡೆಯಬೇಕಾಗಿರುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರದ ಕುರಿತು ಅರಿವು ಇರುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಇದರ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದ ಡಿಸಿ, ಜನನ ಪತ್ರ ನೀಡಲು ಆಸ್ಪತ್ರೆಗಳಲ್ಲಿ ವಿಳಂಬವಾಗುತ್ತಿದೆ. ಸದರಿ ವರ್ಷ ಜಿಲ್ಲೆಯಲ್ಲಿ 1 ವರ್ಷ ಮೇಲ್ಪಟ್ಟ 30 ಮಕ್ಕಳಿಗೆ ಜನನ ಪ್ರಮಾಣ ಪತ್ರ ನೋಂದಣಿ ಆಗಿಲ್ಲ. ಯಾವುದೇ ಕಾರಣಕ್ಕೂ ಜನನ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗಬಾರದು. ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಮಗುವಿನ ತಂದೆ, ತಾಯಿ ಹೆಸರು ಹಾಗೂ ವಿಳಾಸವನ್ನು ಖಾತ್ರಿಪಡಿಸಿಕೊಂಡು ನೊಂದಣಿ ಮಾಡಬೇಕು. ಅಂತೆಯೇ ಜನನ ಮತ್ತು ಮರಣ ಸಂಭವಿಸಿದ 30 ದಿನದೊಳಗೆ ಪ್ರಮಾಣ ಪತ್ರ ಪಡೆಯುವಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯ ಮೂಲಕ ಜನರಿಗೆ ಜಾಗೃತಿ ಮೂಡಿಸಿ ಎಂದರು.
ರೈತರಿಗೆ ಅರಿವು ಮೂಡಿಸಿ: ಜಿಲ್ಲೆಯ ರೈತರು ಸಾಂಪ್ರದಾಯಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸಾಂಪ್ರದಾಯಕ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತದೆ. ರೈತರು ಮಿಶ್ರ ಬೆಳೆ ಮತ್ತು ಪರ್ಯಾಯ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಿಶ್ರಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ರೈತರಿಗೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅರಿವು ಮೂಡಿಸಿ ಎಂದು ಹೇಳಿದರು.
ಸಭೆಯಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.