ಮಂಡ್ಯ ಜಿಲ್ಲಾ ಕುರುಬರ ಸಂಘದ ಅಧಿಕಾರವಾಧಿ ಮುಂದುವರೆಸುವ ಸಂಬಂಧ ಸಹಕಾರ ಇಲಾಖೆಯಿಂದ ನೀಡಿರುವ ಅನುಮತಿ ಪತ್ರವನ್ನು ಪ್ರದರ್ಶಿಸಲಾಯಿತು.  
ಮಂಡ್ಯ

ಹಣದ ಭ್ರಷ್ಟಾಚಾರ ಸಾಬೀತುಪಡಿಸಲಿ: ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಸವಾಲು

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಕಾರ್ಯದರ್ಶಿ ದೊಡ್ಡಯ್ಯ ವಿರುದ್ಧ ಟೀಕಾಪ್ರಹಾರ
  • ಅಧ್ಯಕ್ಷರಿಗೆ ಕಪ್ಪು ಮಸಿ ಎರಚಿ ಸಮುದಾಯದ ಗೌರವ ಕಳೆದಿದ್ದಾರೆ
ಮಂಡ್ಯ: ಕುರುಬರ ಸಂಘದ ಅಭಿವೃದ್ದಿ ಸಹಿಸದ ಮಾಜಿ ಕಾರ್ಯದರ್ಶಿ ದೊಡ್ಡಯ್ಯ ಮತ್ತು ಆತನ ಕೆಲ ಬೆಂಬಲಿಗರು, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರೊಂದಿಗೆ ಸಂಘದ ಘನತೆಗೆ ಚ್ಯುತಿ ತರುತ್ತಿದ್ದಾರೆ. ಒಂದು ವೇಳೆ ಆಡಳಿತದಲ್ಲಿ ಭ್ರಷ್ಟಾಚಾರವೆಸಗಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಸವಾಲು ಹಾಕಿದರು.
ಪ್ರತಿ ಆಡಳಿತ ಮಂಡಳಿಯ ಸಭೆಯಲ್ಲಿ ಭಾಗಿಯಾಗಿರುವ ಹಾರೋಹಳ್ಳಿ ಕೃಷ್ಣ, ಸಾತನೂರು ಮಹೇಶ, ಅಣಸಾಲೆ ಕೃಷ್ಣ ಎಂಬ ನಿರ್ದೇಶಕರು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿರುವುದು ಸತ್ಯಾಂಶಕ್ಕೆ ದೂರವಾಗಿದೆ. ಇದರ ಹಿಂದೆ ದೊಡ್ಡಯ್ಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ನಮ್ಮ ಮೇಲಿನ ಆರೋಪ ಸಾಬೀತುಪಡಿಸಲು ಬೀರೇಶ್ವರಸ್ವಾಮಿ ದೇವರ ಮುಂದೆ ಪ್ರಮಾಣಕ್ಕೆ ಬರಲಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಮಂಡ್ಯ ನಗರದ ಉದಯಗಿರಿ ನಿವಾಸಿ ರಮೇಶ್ ಹಾಗೂ ಸಾತನೂರು ಶೈಲೇಶ್ ಎಂಬುವವರು ಸಂಘದ ಸಮುದಾಯ ಭವನದಲ್ಲಿ ಅವರ ಕುಟುಂಬದ ಮದುವೆ ಕಾರ್ಯ ಮಾಡಿಕೊಂಡು ತಲಾ 45 ಸಾವಿರ ಬಾಡಿಗೆ ಪಾವತಿಸದೇ ವಂಚಿಸಿದ್ದಾರೆ. ಇಂತಹವರು ಪ್ರತಿಭಟನೆಗೆ ಬರಲು ನೈತಿಕತೆ ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ಅವರ ಅಧಿಕಾರಾವಧಿಯಲ್ಲಿ ಹಲವು ಅಭಿವೃದ್ದಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 4 ಕೋಟಿ ರೂ ಅನುದಾನ ತಂದು ನೂತನ ವಿದ್ಯಾರ್ಥಿನಿಲಯ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಸಮುದಾಯ ಭವನದ ಪೂರ್ವದ್ವಾರದಲ್ಲಿ ನನೆಗುದಿಗೆ ಬಿದ್ದಿದ್ದ ಗೇಟ್ ಅಳವಡಿಕೆ, ಅಪೂರ್ಣಗೊಂಡಿದ್ದ ವಿನಾಯಕ ದೇವಾಲಯ, ಅತಿಥಿ ಗೃಹ ನಿರ್ಮಾಣ ಮಾಡಲಾಗಿದೆ. ಇದನ್ನು ಸಹಿಸದೇ ಅಧ್ಯಕ್ಷರಿಗೆ ಕಪ್ಪು ಮಸಿ ಎರಚಿ ಸಮುದಾಯದ ಗೌರವ ಕಳೆದಿದ್ದಾರೆ. ಇದು ಖಂಡನಾರ್ಹ. ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ನಾಗರಾಜು ಅವರಿಗೂ ದೊಡ್ಡಯ್ಯ ಮತ್ತು ಆತನ ಬೆಂಬಲಿಗರು ಕಿರುಕುಳ ನೀಡಿದ್ದರು. ಕನಕ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಿದ ನಾಗರಾಜು ಕಣ್ಣೀರು ಹಾಕುವಂತೆ ಹಿಂಸೆ ನೀಡಿದ್ದರು. ಇಂತಹವರಿಂದ ನೀತಿ ಪಾಠ ಕೇಳುವ ಅಗತ್ಯವಿಲ್ಲವೆಂದರು.
ಮಂಡ್ಯ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ಬೀರಪ್ಪ ಮಾತನಾಡಿ, ಕಳೆದ 20 ವರ್ಷದಿಂದ ಸಮಾಜದ ಹಿರಿಯ ಅಭಿಲಾಷೆಯಂತೆ, ಒಡಂಬಡಿಕೆಯಂತೆ ಅಧಿಕಾರ ನಡೆಸಿ ಸಂಘದ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಜಿಲ್ಲಾ ಕಾರ್ಯಕಾರಿ ಮಂಡಳಿ ಮೇಲೆ ಆರೋಪವೆಸಗುವುದು ಸರಿಯಲ್ಲ. ನಾಲ್ಕಾರು ಕಿಡಿಗೇಡಿಗಳು ಸೇರಿ ಅಧ್ಯಕ್ಷರ ಮೇಲೆ ಕಪ್ಪು ಮಸಿ ಎರಚಿ ಅತಿರೇಕದ ವರ್ತನೆ ತೋರಿದ್ದಾರೆ. ಸೆಸ್ಕಾಂ ನಿವೃತ್ತ ನೌಕರ ಹಾಗೂ ಜಿಲ್ಲಾ ಸಂಘದ ಮಾಜಿ ನಿರ್ದೇಶಕ ದೊಡ್ಡಯ್ಯ ಅವರ ಕುಮ್ಮಕ್ಕಿನಿಂದ ನಾವೆಲ್ಲರೂ ಕ್ರಿಮಿನಲ್ ದಾವೆ ಎದುರಿಸಬೇಕಾಗಿತ್ತು ಎಂದು ಅಸಮಾಧಾನ ಹೊರ ಹಾಕಿದರು.
ಸಂಘದ ಬಡ ಮಕ್ಕಳ ಶಿಕ್ಷಣಕ್ಕೆ ಬುನಾದಿಯಾಗುವ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಅಡಚಣೆ ಉಂಟಾಗಬಾರದೆಂಬ ಉದ್ದೇಶದಿಂದ ಆಡಳಿತ ಮಂಡಳಿ ಒಂದು ವರ್ಷಗಳ ಕಾಲ ಮುಂದುವರಿಯಲು ಸರ್ವ ಸದಸ್ಯರ ಸಭೆಯಲ್ಲಿ ಅನುಮತಿ ಪಡೆಯಲಾಗಿದೆ, ಸಭೆಯಲ್ಲಿ ಭಾಗಿಯಾಗಿದ್ದ 700 ಸದಸ್ಯರ ಪೈಕಿ, 650 ಜನ ಬೆಂಬಲ ಸೂಚಿಸಿದ್ದಾರೆ. ಕೇವಲ 50 ಜನ ವಿರೋಧ ಮಾಡುವುದನ್ನು ಅತಿರೇಕ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಗರಸಭೆ ಮಾಜಿ ಸದಸ್ಯ ಮಹೇಶ್ ಮಾತನಾಡಿ, ಕುರುಬರ ಸಂಘದ ಅಬಿವೃದ್ದಿಗೆ ಶಕ್ತಿ ಮೀರಿ ದುಡಿಯುತ್ತಿರುವ ಅಧ್ಯಕ್ಷ ಸುರೇಶ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿ ಮಸಿ ಎರಚುವ ಹೀನ ಕೃತ್ಯವೆಸಗುವ ವ್ಯಕ್ತಿಗಳಿಗೆ ಪ್ರಚೋಧನೆ ನೀಡುವವರು ಹಾಗೂ ಸದರಿ ವ್ಯಕ್ತಿಗಳು ಸಮಾಜದ ಕಂಟಕರು. ಮಸಿ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರಿನ ಬೀರೇಶ್, ಹಾರೋಹಳ್ಳಿಯ ರಾಜು ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ರಾಜ್ಯ ಸಮಿತಿ ನಿರ್ದೇಶಕಿ ಸಾವಿತ್ರಮ್ಮ, ಸಾತನೂರು ರಾಜು, ನರಸಪ್ಪ ಹೆಗಡೆ, ಮೀನಾಕ್ಷಿ, ಹುಚ್ಚಪ್ಪ, ಪಾರ್ಥ ಇತರರಿದ್ದರು.