ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ 
ಮಂಡ್ಯ

ಒಂದು ಸಾವಿರ ಎಕರೆ ಬೇಕೆನ್ನಬಹುದು: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯ: ಮಾಜಿ ಶಾಸಕರನ್ನು ಕೂರಿಸಿಕೊಂಡು ಸಭೆ ಮಾಡಿ ಕೇವಲ ಪ್ರಚಾರಕ್ಕಾಗಿ ಜಾಗ ಹುಡುಕಿಕೊಡಿ ಎಂದು ಕೇಳುತ್ತಾರೋ ಅಥವಾ ಜಿಲ್ಲೆ ಮತ್ತು ರಾಜ್ಯಕ್ಕೆ ಕೈಗಾರಿಕೆಗಳನ್ನು ತರುವ ಪ್ರಯತ್ನ ಮಾಡುತ್ತೀರೋ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಭೂಮಿ ಕೊಡುತ್ತಿಲ್ಲ ಎನ್ನುತ್ತಿದ್ದರು. ಈಗ 100 ಎಕರೆ ಜಮೀನು ಕೊಡುವುದಾಗಿ ತಿಳಿಸಿದ್ದೇವು. ಅದೂ ಸಾಲುವುದಿಲ್ಲ, 500 ಎಕರೆ ಬೇಕೆಂದು ಕೇಳುತ್ತಿದ್ದಾರೆ. ಇನ್ನೂ ಮುಂದೆ ಹೋಗಿ ಒಂದು ಸಾವಿರ ಎಕರೆ ಜಮೀನು ಕೇಳಬಹುದು. ಅವರಿಗೆ ಇನ್ನೂ ಮೂರು ವರ್ಷ ಕಾಲಾವಕಾಶ ಇದೆ. ಜಿಲ್ಲೆಯಲ್ಲಿ ಅಥವಾ ರಾಜ್ಯದ ಯಾವುದೇ ಭಾಗದಲ್ಲಾದರೂ ಮಾಡಲಿ, ಆದರೆ ನಾನು ಆ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
ನಮ್ಮ ಸರ್ಕಾರಕ್ಕೆ ಇನ್ನೂ ಎರಡು ವರ್ಷಗಳ ಕಾಲಾವಕಾಶ ಇದೆ. ಅವರಿಗೆ ಇನ್ನೂ ಮೂರು ವರ್ಷ ಅವಕಾಶ ಇದೆ. ನಾವು ಮಾತನಾಡುವುದಿಲ್ಲ. ಕೆಲಸ ಮಾಡಿ ತೋರಿಸುತ್ತೇವೆ. ನಾನು ಕೃಷಿ ವಿಶ್ವವಿದ್ಯಾನಿಲಯವನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿದೆ. ಈ ಬಗ್ಗೆ ಚರ್ಚೆ ಮಾಡಿಲ್ಲ. ಮೈಷುಗರ್ ಕಾರ್ಖಾನೆ ನಡೆಸುತ್ತಿದ್ದೇವೆ. ಅವರು ಮಾತನಾಡುತ್ತಿದ್ದಾರೆ. ಏನು ಮಾಡುತ್ತಾರೋ ನೋಡೋಣ. ಈ ವಿಚಾರವನ್ನು ಜನರಿಗೇ ಬಿಡುತ್ತೇನೆ ಅವರೇ ತೀರ್ಮಾನ ಮಾಡಲಿ ಎಂದಷ್ಟೇ ತಿಳಿಸಿದರು.
ರಾಜ್ಯಸರ್ಕಾರ ಬಂದು ಎರಡೂವರೆ ವರ್ಷದ ನಂತರ ಸಂಪುಟ ಪುನರ್‌ರಚನೆಯಾಗಬೇಕು. ಈ ಮಧ್ಯೆ ಉಪ ಚುನಾವಣೆಗಳು ಎದುರಾದವು. ಹಾಗಾಗಿ ಸಂಪುಟ ಪುನರ್‌ರಚನೆ ಮಾಡಲು ಸಾಧ್ಯವಾಗಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ನಾಲ್ಕೈದು ಬಾರಿ ಆಯ್ಕೆಯಾಗಿರುವವರು ನಮಗೂ ಮಂತ್ರಿ ಸ್ಥಾನ ಕೊಡಿ ಎಂದು ದೆಹಲಿಗೆ ಹೋಗಿ ವರಿಷ್ಠರನ್ನು ಕೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಮತ್ತು ಯಾರನ್ನು ಬಿಡಬೇಕು ಎಂಬುದು ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅಂತಿಮವಾಗಿ ಹೈಕಮಾಡ್ ನಿರ್ಧಾರ ತೆಗೆದುಕೊಳ್ಳಲಿದೆ. ಮಂಡ್ಯಕ್ಕೆ ಮತ್ತೊಂದು ಮಂತ್ರಿ ಸ್ಥಾನ ಸಿಗಬೇಕು ಎಂದು ಅಭಿಪ್ರಾಯಪಟ್ಟರು.