ಮಂಡ್ಯದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾದರ ಮಹಾಸಭಾದ ರಾಜ್ಯ ನಿರ್ದೇಶಕ ಎನ್.ಆರ್. ಚಂದ್ರಶೇಖರ್ ಮಾತನಾಡಿದರು. 
ಮಂಡ್ಯ

ಮಾದರ ಸಮುದಾಯಕ್ಕೆ ಆದ್ಯತೆ ನೀಡಲಿ: ಮಹಾಸಭಾದ ರಾಜ್ಯ ನಿರ್ದೇಶಕ ಎನ್.ಆರ್.ಚಂದ್ರಶೇಖರ್ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಮಟ್ಟದ ಕಾರ್ಯಕಾರಿಣಿ ಸಭೆ
  • ನಗರದ ಪತ್ರಕರ್ತರ ಭವನದಲ್ಲಿ ಆಯೋಜನೆ
ಮಂಡ್ಯ: ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಾಶರಣ ಮಾದರ ಚನ್ನಯ್ಯ ಅವರಿಗೆ ನೀಡಿದ ಮಾನ್ಯತೆಯನ್ನು ಪ್ರಸ್ತುತ ದಿನಗಳಲ್ಲಿ ಆ ಸಮುದಾಯದವರಿಗೂ ಸರ್ಕಾರ ಆಧ್ಯತೆ ನೀಡಬೇಕು ಎಂದು ಮಾದರ ಮಹಾಸಭಾದ ರಾಜ್ಯ ನಿರ್ದೇಶಕ ಎನ್.ಆರ್. ಚಂದ್ರಶೇಖರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾದರ ಮಹಾಸಭಾ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾರ್ಯಕಾರಿಣಿ ಸಭೆ ಮತ್ತು ರಾಷ್ಟ್ರೀಯ ಜನಗಣತಿ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೀವನರಾಂ ಎರಡು ಕಣ್ಣುಗಳಿದ್ದಂತೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ ಸಾರಿದರೆ, ಜಗಜೀವನರಾಂ ಸಾಮಾಜಿಕ ಸಮಾನತೆ ಮತ್ತು ಹಸಿರು ಕ್ರಾಂತಿಗೆ ಕಾರಣಕರ್ತರಾಗಿದ್ದರು ಎಂದು ಬಣ್ಣಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಈ ದಾರ್ಶನಿಕರನ್ನೂ ಸಮಾನವಾಗಿ ನೋಡುವಂತಹ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಹಿರಿಮೆ, ಕಿರಿಮೆ ಎಂದು ಕಾಣದೆ ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದೇವೆ. ಮಾದರ ಮಹಾಸಭಾ ವತಿಯಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದ್ದು, ಪ್ರತಿಯೊಬ್ಬರು ಸಂಘದ ಸದಸ್ಯರಾಗುವ ಮೂಲಕ ಸಂಘವನ್ನು ಮತ್ತಷ್ಟು ಬೆಳೆಸಬೇಕು. ಪ್ರಸ್ತುತ ಭಾರತ ಸರ್ಕಾರ ರಾಷ್ಟ್ರೀಯ ಜನಗಣತಿ ಆರಂಭಿಸಿದೆ. ಜನಗಣತಿ ಸಂದರ್ಭದಲ್ಲಿ ಮಾದಿಗ ಸಮುದಾಯದವರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಮಾದಿಗ ಎಂದೇ ಬರೆಸುವಂತೆ ಸಲಹೆ ನೀಡಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಎನ್.ಕಾಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾಮನಹಳ್ಳಿ ಮಂಜು, ಬಾಬು ಜಗಜೀವನರಾಂ ಒಕ್ಕೂಟದ ಉಪಾಧ್ಯಕ್ಷ ಕೆಂಪಯ್ಯ, ಬಾಳೆಹೊನ್ನಿಗ ಕುಮಾರ್, ಶಂಭೂನಹಳ್ಳಿ ರವಿಕುಮಾರ್, ರಮೇಶ್, ಎಲೆಚಾಕನಹಳ್ಳಿ ಸ್ವಾಮಿ, ರಂಜಿತ್, ಅಂಬೂಜಿ, ಶ್ರೀನಿವಾಸ್, ಚಿಕ್ಕನಿಂಗಯ್ಯ ಇತರರಿದ್ದರು.