ಶ್ರೀರಂಗಪಟ್ಟಣ : ಮಾ.14ರಂದು ಮಂಡ್ಯದ ವಿ.ಸಿ.ಫಾರಂನಲ್ಲಿ ಹಮ್ಮಿಕೊಂಡಿರುವ ಕ್ರೀಡಾಂಗಣ ಶಂಕುಸ್ಥಾಪನೆ ಹಾಗೂ ಅಂಗವಿಕಲ ಅರ್ಹ ಫಲಾನುಭಿಗಳಿಗೆ ಇವಿ ವಾಹನಗಳ ವಿತರಣೆ ಕಾರ್ಯಕ್ರಮಕ್ಕೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಎಚ್ಡಿಕೆ ಅಭಿಮಾನಿಗಳು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕ್ಷೇತ್ರದ ಜೆಡಿಎಸ್ ಪಕ್ಷದ ಮೂಲ ಕಾರ್ಯಕರ್ತರು ಮನವಿ ಮಾಡಿದರು.
ಹಿರಿಯ ಮುಖಂಡ ಪಿ.ಎಚ್.ಚಂದ್ರಶೇಖರ್ ಮಾತನಾಡಿ ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ಕ್ರೀಡಾ ಸಚಿವ ಮನ್ಸುಕ್ ಮಾಂಡವ್ಯ ಅವರು ನಮ್ಮ ಜಿಲ್ಲೆಗೆ 14 ಕೋಟಿ ರೂ. ವೆಚ್ಚದ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಲು ಆಗಮಿಸುತ್ತಿರುವುದು ಅತ್ಯಂತ ಸಂತಸದಾಯಕವಾದ ವಿಚಾರ. ಜತೆಗೆ ದೇಶದಲ್ಲೇ ಮೊದಲ ಭಾರಿಗೆ ಅಂಗವಿಕಲ ಅರ್ಹ ಫಲಾನುಭವಿಗಳಿಗೆ 388 ಇವಿ ವಾಹನಗಳನ್ನು ನೀಡುತ್ತಿರುವುದು ಎಚ್.ಡಿ.ಕುಮಾರಸ್ವಾಮಿ ಅವರ ಜನಪರ ಆಡಳಿತಕ್ಕೆ ಕೈಗನ್ನಡಿಯಾಗಿದ್ದು, ಶ್ಲಾಘನೀಯ ಸಂಗತಿ. ಈ ಕಾರ್ಯಕ್ಕೆ ನಮ್ಮ ತಾಲೂಕಿನ ಎಲ್ಲ ಹಳ್ಳಿಗಳಿಂದಲೂ ಜನರು ಸ್ವಯಂಪ್ರೇರಣೆಯಿಂದ ಆಗಮಿಸಬೇಕು, ಇದಕ್ಕಾಗಿ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಭಿಮಾನ ಹೊಂದಿದ್ದಾರೆ. ಸಂಸದರಾದ ಬಳಿಕ ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ನೀಡಿ ದೊಡ್ಡ ಜವಾಬ್ದಾರಿಯೊಂದಿಗೆ ದೇಶದ ಅಭಿವೃದ್ಧಿ ಮತ್ತು ಮಂಡ್ಯ ನೆಲದ ಜನರ ಸಮಸ್ಯೆಗಳಿಗೆ ಧನಿಯಾಗಲು ಶಕ್ತಿ ತುಂಬಿದ್ದಾರೆ. ಈ ಜಿಲ್ಲೆಯ ಅಭಿವೃದ್ಧ್ದಿಗಾಗಿ ಸಾಕಷ್ಟು ಯೋಜನೆಗಳ ತರುತ್ತಿರುವ ಅವರು ಜಿಲ್ಲೆಯ ಯುವಜನರ ನಿರುದ್ಯೋಗ ನಿವಾರಣೆಗಾಗಿ ಮಾದರಿ ಬೃಹತ್ ಕೈಗಾರಿಕೆಗಳನ್ನು ಮಂಡ್ಯಕ್ಕೆ ತಂದು ಇಲ್ಲಿ ಸ್ಥಾಪನೆ ಮಾಡುವುದು ಶತಸಿದ್ದ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧಿಸುವ ರಾಜಕಾರಣಿಗಳ ಗುಂಪು ಎಚ್‌ಡಿಕೆ ಅವರ ಆಡಳಿತ ಮತ್ತು ಕಾರ್ಯಕ್ಕೆ ಸಹಕಾರ ನೀಡದೆ ಜನರೆದುರು ನಾಟಕ ಪ್ರದರ್ಶಿಸುತ್ತಿದ್ದಾರೆ ಎಂದರು.
ಜೆಡಿಎಸ್ ಮಾಜಿ ಅಧ್ಯಕ್ಷ ಪೈ.ಮುಕುಂದ ಮಾತನಾಡಿ, ಪ್ರಸ್ತುತ ಕ್ಷೇತ್ರದಲ್ಲಿರುವ ಜೆಡಿಎಸ್‌ನ ತಾಲೂಕು ಅಧ್ಯಕ್ಷ ದಶರಥ ಅವರು ಒಬ್ಬ ನಿಷ್ಕ್ರಿಯ ವ್ಯಕ್ತಿಯಾಗಿದ್ದು, ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಒಗ್ಗೂಡಿಸುವಲ್ಲಿ ಅಸಮರ್ಥ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಸಹ ಈ ಬಗ್ಗೆ ಕಾರ್ಯಕರ್ತರಿಗೆ ಯಾವುದೇ ಮಾಹಿತಿ ನೀಡದೆ ತಾಲೂಕು ಅಧ್ಯಕ್ಷ ನಿರ್ಲಕ್ಷ ತೋರಿದ್ದಾರೆ. ಕ್ಷೇತ್ರದಲ್ಲಿ ಯಾರೋ ಒಬ್ಬರ ಸೂತ್ರದ ಕೈಗೊಂಬೆಯಂತೆ ವರ್ತಿಸುತ್ತಿರುವ ಇವರಿಂದ ಜೆಡಿಎಸ್‌ನ ಮೂಲ ಕಾರ್ಯಕರ್ತರು ಮನನೊಂದಿದ್ದಾರೆ ಎಂದು ದೂರಿದರು.
ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಕಿರಂಗೂರು ಕುಮಾರಸ್ವಾಮಿ, ಮುಖಂಡ ದರಸಗುಪ್ಪೆ ಗೋಪಾಲ್ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.