ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಸಹಾಯಧನ ಚೆಕ್ ಅನ್ನು ಫಲಾನುಭವಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಗಣಿಗ ವಿತರಿಸಿದರು. 
ಮಂಡ್ಯ

450 ಫಲಾನುಭವಿಗಳಿಗೆ ಸೌಲಭ್ಯ: 48 ಕೋಟಿ ರೂ ಮೌಲ್ಯದ ಸಾಮಗ್ರಿ ವಿತರಣೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ವಿಧಾನಸಭಾ ಕ್ಷೇತ್ರದ 450 ಫಲಾನುಭವಿಗಳಿಗೆ ಸವಲತ್ತು
  • ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿತರಣೆ
ಮಂಡ್ಯ: ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ 450 ಫಲಾನುಭವಿಗಳಿಗೆ ಅಂದಾಜು 48 ಕೋಟಿ ರೂ ಮೌಲ್ಯದ ಸಾಮಗ್ರಿ ವಿತರಣೆ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಇತರೆ ಹತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣ ಇಲಾಖೆ, ನಗರಸಭೆಯ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಯಿತು. ಇದೇ ವೇಳೆ ಅಂಗವಿಕಲರಿಗಾಗಿ 50 ತ್ರಿಚಕ್ರ ಸ್ಕೂಟರ್ ನೀಡಲಾಯಿತು. ಈ ಸಂದರ್ಭದಲ್ಲಿ ಅವರ ಮುಖದಲ್ಲಿ ಮಂದಹಾಸ ಮೂಡಿತ್ತು.
ರಾಜ್ಯ ಒಕ್ಕಲಿಗರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮಾತನಾಡಿ, ಕಳೆದ ಮೂರು ವರ್ಷದಲ್ಲಿ ನಿಗಮದಿಂದ ಜಿಲ್ಲೆಯಲ್ಲಿ 234 ಸ್ವಯಂ ಉದ್ಯೋಗಿಗಳಿಗೆ ನೇರ ಸಾಲ, 175 ಕೊಳವೆ ಬಾವಿ, 77 ಸ್ವಾವಲಂಭಿ ಸಾರಥಿ ವಾಹನ ಸಾಲ, 14 ಜನರಿಗೆ ಅರಿವು ಶೈಕ್ಷಣಿಕ ಸಾಲ, 655 ಫಲಾನುಭವಿಗಳಿಗೆ 15 ಕೋಟಿ ರೂ ವೆಚ್ಚದ ವಿವಿಧ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಪೌರಾಡಳಿತ ಇಲಾಖೆಯ ನಿರ್ದೇಶಕ ಅರುಣ್, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಬೋರೇಗೌಡ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ, ಪೌರಾಯುಕ್ತೆ ಪಂಪಶ್ರೀ, ಕಾರ್ಯಪಾಲಕ ಇಂಜಿನಿಯರ್ ಪ್ರತಾಪ್, ನಗರಸಭೆ ಮಾಜಿ ಸದಸ್ಯರಾದ ಶ್ರೀಧರ್, ನಹೀಂ ಇತರರಿದ್ದರು.

ಅಭಿವೃದ್ಧಿಯಲ್ಲಿ ಮಂಡ್ಯ ಕ್ಷೇತ್ರ ಮುಂಚೂಣಿ
ಮುಂದಿನ ಎರಡೂವರೆ ವರ್ಷದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ದಿಗಿಂತ ಮುಂಚೂಣಿಯಲ್ಲಿರಲಿದೆ. ಇದಕ್ಕೆ ಶ್ರಮಿಸುತ್ತಿರುವ ಪಿ.ರವಿಕುಮಾರ್ ಗಣಿಗ ಅವರು ಉತ್ಸಾಹಿ ಶಾಸಕರೆಂದು ಹೇಳುವುದಕ್ಕೆ ಖುಷಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು.
ಪಿ.ರವಿಕುಮಾರ್ ಗಣಿಗ ಸದಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಜತೆಗೆ ಕ್ಷೇತ್ರದಲ್ಲಿ ನಡೆಯಲಿರುವ ಎಲ್ಲ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳುತ್ತಾರೆ. ಸಾವು-ನೋವುಗಳಿಗೆ ಸ್ಪಂದಿಸುವ ಜತೆಗೆ ಕ್ಷೇತ್ರದ ಅಭಿವೃದ್ದಿಗೆ ಸೂಕ್ತ ಅನುದಾನ ತರುವ ಕೌಶಲ ಬೆಳೆಸಿಕೊಂಡಿದ್ದಾರೆಂದು ಗುಣಗಾನ ಮಾಡಿದ ಸಚಿವ ಸಿಆರ್‌ಎಸ್, ಮುಂದಿನ 2 ವರ್ಷದಲ್ಲಿ ಜಿಲ್ಲಾ ಕೇಂದ್ರದ ವೃತ್ತಗಳ ಸೌಂದರ್ಯಿಕರಣ, ಉತ್ತಮ ರಸ್ತೆಗಳ ನಿರ್ಮಾಣ ಹಾಗೂ ಅಗತ್ಯ ಸೌಲಭ್ಯಗಳ ಅಳವಡಿಕೆಯಿಂದ ಜಿಲ್ಲಾ ಕೇಂದ್ರಕ್ಕೆ ಇತರೆ ತಾಲೂಕುಗಳ ಲಕ್ಷಾಂತರ ಜನತೆ ಬಂದು ಹೋಗುವ ವಾತಾವರಣ ಸೃಷ್ಠಿಯಾಗಲಿದೆ ಎಂದರು.
ಜಿಲ್ಲಾ ಕೇಂದ್ರದ ನಿರೀಕ್ಷಿತ ಅಭಿವೃದ್ದಿಗೆ ನನ್ನೊಡನೆ ಸ್ಪಂದಿಸುವ ಶಾಸಕರು ಚುನಾಯಿತರಾಗಬೇಕೆಂಬ ನನ್ನ ಕನಸು ಸಾಕಾರಗೊಂಡಿದೆ. ಜಿಲ್ಲೆಯ 6 ಶಾಸಕರು ಸೇರಿ ರಾಜ್ಯದ 139 ಶಾಸಕರ ಬಲವುಳ್ಳ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಅಭಿವೃದ್ದಿಗೆ ಗಮನಹರಿಸುವ ಇರಾದೆ ನಮ್ಮ ಸರ್ಕಾರಕ್ಕಿದೆ. ಮಧ್ಯಪ್ರದೇಶದಲ್ಲಿ 17 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಹಾಲಿ ಕೇಂದ್ರದ ಕೃಷಿ ಸಚಿವರು ನಮ್ಮ ಸರ್ಕಾರದ ಕೃಷಿ ಇಲಾಖೆಯ ಸಾಧನೆಯನ್ನು ಮೆಚ್ಚಿದ್ದಾರೆ. ಇವರ ಹೊಗಳಿಕೆಗಿಂತ ಆರ್.ಅಶೋಕ್, ಸಿ.ಟಿ.ರವಿ ಅಥವಾ ಜೆಡಿಎಸ್‌ನವರ ಪ್ರಶಂಸೆ ನಮಗೆ ಬೇಕೇ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ನಮ್ಮ ಸರ್ಕಾರವನ್ನು ಸದಾ ಟೀಕಿಸುವುದೇ ಉದ್ಯೋಗವಾಗಿದೆ. 139 ಶಾಸಕರ ಬಲವುಳ್ಳ ರಾಜ್ಯದ 7 ಕೋಟಿ ಜನರ ಆಶೀರ್ವಾದದಿಂದ ರಚಿತವಾಗಿರುವ ಸರ್ಕಾರವನ್ನು ಕಿತ್ತೆಸೆಯುವ ಹೇಳಿಕೆ ಹಾಸ್ಯಾಸ್ಪದವಲ್ಲವೇ?. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರೈತರಿಗೆ ಆರ್ಥಿಕ ಶಕ್ತಿ ತುಂಬುದ ಸದುದ್ದೇಶದಿಂದ ರೈತರು ಉತ್ಪಾದಿಸುವ ಬೆಳೆಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಇರಾದೆಯೊಂದಿಗೆ ರಫ್ತು ವಹಿವಾಟು ಹೆಚ್ಚಿಸಲು 100 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಮಂಡ್ಯ ಜಿಲ್ಲೆಯ ರೈತರಿಗೂ ವರದಾನವಾಗಲಿದೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿಯಿಂದ ಸ್ಥಾಪನೆಯಾಗಿದ್ದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯ ತೆರೆದಿರುವ ಸರ್ಕಾರದ ನಿರ್ಧಾರವನ್ನು ಉರಿಲಿಂಗಿ ಪೆದ್ದಿ ಮಠದ ಪೀಠಾಧಿಪತಿ ಜ್ಞಾನ ಪ್ರಕಾಶ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ.ಕೆ.ವಿ.ಕೆಯಿಂದ ವಿಸರ್ಜಿಸಿ ಹೊಸ ವಿ.ವಿ.ತೆರೆಯುವ ಕೆಲಸ ಸುಲಭವಲ್ಲ ಎಂಬುವುದು ನನಗೂ ಗೊತ್ತಿತ್ತು. ನಮ್ಮ ಶಾಸಕರ ಸಹಕಾರ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಅಭಿಮಾನದಿಂದ ವಿ.ವಿ.ಕಾರ್ಯಾರಂಭವಾಗಿದೆ ಎಂದರು.

ಅಲೆದಾಟವಿಲ್ಲದೇ ಸವಲತ್ತು ವಿತರಣೆ
ಕಳೆದ ಎರಡೂವರೆ ವರ್ಷದ ನಮ್ಮ ಸರ್ಕಾರದ ಅವಧಿಯಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ಸೂಕ್ತ ಸವಲತ್ತು ವಿತರಿಸಲಾಗಿದೆ. ಅಲೆದಾಟ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸವಲತ್ತು ವಿತರಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಅಧಿಕಾರದ ಮಾದರಿ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ತಿಳಿಸಿದರು.
50 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಗುತ್ತಿದೆ. ಇದುವರೆಗೆ 200 ಜನರಿಗೆ ಹಂಚಿಕೆ ಮಾಡಲಾಗಿದೆ. ಲೆಕ್ಕವಿಲ್ಲದಷ್ಟು ಹೊಲಿಗೆ ಯಂತ್ರ ವಿತರಣೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸಲಾಗಿದೆ. ಎರಡೂವರೆ ವರ್ಷದ ಅವಧಿಯಲ್ಲಿ ಸುಮಾರು 150 ಜನರಿಗೆ ಕಾರು ವಿತರಿಸಲಾಗಿದೆ. ಮುಂದಿನ ಒಂದು ತಿಂಗಳೊಳಗೆ ಮಂಡ್ಯದಲ್ಲಿ ಸಾಫ್ಟ್‌ವೇರ್ ಕಂಪನಿ ಆರಂಭಿಸಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಮೀನು ಮೀಸಲಿಡಲಾಗಿದ್ದು, ಗುಂಡಿ ಮುಕ್ತ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.