ಹಲಗೂರಿನ ಅಂಬೇಡ್ಕರ್ ಭವನದಲ್ಲಿ ಅನಾಥ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ ಮಾಡಲಾಯಿತು. ಸುಂದರಪ್ಪ, ಮೂರ್ತಿ, ಉಮೇಶ್ ಮಠಪತಿ, ಸಿ.ಪ್ರವೀಣ್, ಆನಂದ ಇತರರು ಇದ್ದರು.
ಹಲಗೂರು: ನೀವು ಅನಾಥ ಮಕ್ಕಳಲ್ಲ, ದೇವರ ಮಕ್ಕಳು ಎಂದು ತಿಳಿದುಕೊಂಡು ವ್ಯಾಸಂಗ ಮಾಡಬೇಕು. ದಾನಿಗಳು ಇರುವವರೆಗೂ ನೀವು ಯಾವುದಕ್ಕೂ ಧೃತಿಗೆಡಬಾರದು ಎಂದು ಲಿಂಗಪಟ್ಟಣದ ನಿವೃತ್ತ ಶಿಕ್ಷಕ ಸುಂದರಪ್ಪ ಹೇಳಿದರು.
ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಬೆನಮನಹಳ್ಳಿ, ನಾರಾಯಣಪುರ, ಕಿರಗವಾಲು, ಹೊಸಹಳ್ಳಿ, ಕುಂದೂರು, ಹುಸ್ಕೂರು, ತೊರೆ ಕಾಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅನಾಥ ಮಕ್ಕಳಿಗೆ ನೋಟ್‌ಬುಕ್, ಬ್ಯಾಗ್, ಬಟ್ಟೆ ಮತ್ತು ಲೇಖನಿ ಸಾಮಗ್ರಿ ವಿತರಿಸಿ ಮಾತನಾಡಿದರು.
ನಿಮಗೆ ಯಾವುದೇ ತೊಂದರೆ ಬಂದರೆ, ಯಾವುದಾದರೂ ಪದಾರ್ಥಗಳು ಬೇಕಾದರೆ ನಮ್ಮನ್ನು ಸಂಪರ್ಕಿಸಿ. ನಾವು ನಿಮಗೆ ಸಹಕರಿಸಲು ಸಿದ್ಧರಿದ್ದೇವೆ. ದಾನಿಗಳು ಇರುವವರೆಗೂ ನೀವು ಯಾವುದಕ್ಕೂ ಧೃತಿಗೆಡದೆ ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಪಿಯುಸಿ, ಪದವಿ ಪಡೆದು ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದರು.
ಅನಿಕೇತನ ಲಯನ್ಸ್ ಕ್ಲಬ್ ಅಧ್ಯಕ್ಷ ಮೂರ್ತಿ ಮಾತನಾಡಿ, ನಾವು ಮಾಡಿದ ಸಂಪಾದನೆಯಲ್ಲಿ ಒಂದು ಭಾಗವನ್ನು ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದ್ದೇವೆ. ನೀವು ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಪ್ರಜೆ ಆಗಬೇಕು ಎಂದು ಸಲಹೆ ನೀಡಿದರು.
ವೈದ್ಯಾಧಿಕಾರಿ ಉಮೇಶ್ ಮಠಪತಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಗೆ ನಮ್ಮ ಪೂರ್ತಿ ಬೆಂಬಲ ಇದೆ. ಯಾವುದೇ ಸಂದರ್ಭದಲ್ಲಿ ಮಕ್ಕಳಿಗೆ ಅನುಕೂಲವಾಗುವ ರೀತಿ ಸಹಕರಿಸಲು ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಅನಿಕೇತನ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು. ಹುಸ್ಕೂರು ಗ್ರಾಮದ ಬಡ ಮಹಿಳೆಗೆ ಅಕ್ಕಿ ವಿತರಿಸಲಾಯಿತು. ವೈದ್ಯಾಧಿಕಾರಿಗಳಾದ ಸಿ.ಪ್ರವೀಣ್, ಆನಂದ, ಲಿಂಗರಾಜು, ಮಲ್ಲೇಶ, ರಾಮಚಂದ್ರ, ರವಿ, ಬೋರೇಗೌಡ, ಅಭಿ, ಜಿ.ಎಸ್.ಕೃಷ್ಣ, ಮಹೇಶ ಇತರರು ಇದ್ದರು.