ಮಂಡ್ಯ ತಾಲೂಕು ಬಿ.ಗೌಡಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಂಭು ಸೇವಾ ಟ್ರಸ್ಟ್ ವತಿಯಿಂದ ಬ್ಯಾಗ್‌ಗಳನ್ನು ವಿತರಿಸಲಾಯಿತು.
- ಬಿ.ಗೌಡಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ
ಮಂಡ್ಯ: ತಾಲೂಕಿನ ಬಿ.ಗೌಡಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಂಭು ಸೇವಾ ಟ್ರಸ್ಟ್ ವತಿಯಿಂದ ಶಾಲಾ ಬ್ಯಾಗ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಹಾಗೂ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ನಮ್ಮ ಟ್ರಸ್ಟ್ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಬ್ಯಾಗ್‌ಗಳನ್ನು ಹಲವು ವರ್ಷದಿಂದ ವಿತರಣೆ ಮಾಡಲಾಗುತ್ತಿದೆ. ಸಮಾಜದ ಕಡುಬಡವರು ಹಾಗೂ ರೋಗಿಗಳಿಗೆ ಆರ್ಥಿಕ ಸಹಾಯ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಸಮಾಜದಲ್ಲಿ ಕೇವಲ ಹಣ ಗಳಿಸುವುದಷ್ಟೇ ಅಲ್ಲ, ಆ ಹಣದಿಂದ ಬಡವರು ಮತ್ತು ನಿರ್ಗತಿಕರನ್ನು ಮೇಲೆತ್ತಲು ಉಪಯೋಗಿಸಬೇಕು. ಆಗ ನಾವು ಈ ಭೂಮಿ ಮೇಲೆ ಹುಟ್ಟಿರುವುದಕ್ಕೂ ಸಾರ್ಥಕವಾಗುತ್ತದೆ. ಆದ್ದರಿಂದ ಬಂಡವಾಳಶಾಹಿಗಳು ತಮ್ಮ ಕೈಲಾದ ಸಹಾಯ ಮಾಡಬೇಕೆಂದರು.
ಜೆಡಿಎಸ್ ಮಂಡ್ಯ ತಾಲೂಕು ಅಧ್ಯಕ್ಷ ಬೂದನೂರು ಸ್ವಾಮಿ, ತಾಪಂ ಮಾಜಿ ಸದಸ್ಯ ಹನಕೆರೆ ಕಿರಣ್‌ಕುಮಾರ್ ಇತರರಿದ್ದರು.