ಮದ್ದೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಾಗಾರವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಕೆ.ಆರ್.ನಂದಿನಿ, ಯೋಗೇಶ್, ಧನಂಜಯ, ಎಸ್.ರಾಜೇಶ್ವರಿ, ರಾಮಲಿಂಗಯ್ಯ ಇದ್ದರು.
ಮದ್ದೂರು: ಅಕ್ಷರ ದಾಸೋಹ ಅಡುಗೆ ಸಿ:ಬ್ಬಂದಿಗೆ ಸರ್ಕಾರದಿಂದ ಹೆಚ್ಚಿನ ಸವಲತ್ತು ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿಗೆ ಯೋಜಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಶುಚಿ ಮತ್ತು ರುಚಿಯಾದ ಅಡುಗೆ ಮಾಡಿ ವಿದ್ಯಾರ್ಥಿಗಳಿಗೆ ಬಡಿಸುವ ಮೂಲಕ ಯೋಜನೆ ಯಶಸ್ವಿಯಾಗಲು ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೂರು ವರ್ಷಗಳಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ತಾಲೂಕಿನ ಅಡುಗೆ ಸಿಬ್ಬಂದಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ಸರ್ಕಾರದಿಂದ ನೀಡುವ ಸವಲತ್ತಿನ ಜತೆಗೆ ಟ್ರಸ್ಟ್ ವತಿಯಿಂದ ಹಲವು ಸೌಲಭ್ಯ ನೀಡುತ್ತಿದ್ದು, ಮುಂದೆಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿ.ಪಂ. ಸಿಇಓ ಕೆ.ಆರ್.ನಂದಿನಿ ಮಾತನಾಡಿ, ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಒದಗಿಸುವ ನಿಟ್ಟಿನಲ್ಲಿ ಅಡುಗೆ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು ಎಂದರು.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನೀಡಲಾಗುತ್ತಿರುವ ಬಿಸಿಯೂಟದ ಗುಣಮಟ್ಟ, ಆಹಾರ ಸಾಮಗ್ರಿ ಗುಣಮಟ್ಟ ಸೇರಿದಂತೆ ಇತರ ಸಮಸ್ಯೆಗಳು ಕಂಡುಬಂದಲ್ಲಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಈ ಸಹಾಯವಾಣಿ ಸಂಖ್ಯೆಯನ್ನು ಅಡುಗೆ ಮನೆ, ಶಾಲೆಯ ಸೂಚನಾ ಫಲಕ ಮತ್ತು ಇತರ ಸ್ಥಳಗಳಲ್ಲಿ ಪ್ರದರ್ಶನ ಮಾಡುವಂತೆ ಸಿಇಓ ತಿಳಿಸಿದರು.
ಶಾಲೆಗೆ ಸರಬರಾಜು ಮಾಡುವ ಆಹಾರ ಸಾಮಗ್ರಿ ಗುಣಮಟ್ಟ ಸರಿಯಾಗಿ ಇಲ್ಲದಿದ್ದಲ್ಲಿ ಕೂಡಲೇ ಶಾಲೆಯ ಮುಖ್ಯಶಿಕ್ಷಕರಿಗೆ ಮಾಹಿತಿ ನೀಡಬೇಕು. ಆ ನಂತರದಲ್ಲಿಯೂ ಅವರು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಆ ತಾಲೂಕಿನ ಸಹಾಯಕ ನಿರ್ದೇಶಕರಿಗೆ ತಿಳಿಸಬೇಕು. ಆಗಲೂ ಸೂಕ್ತ ಕ್ರಮ ಆಗದಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು ಎಂದು ತಿಳಿಸಿದರು.
ಸಮಸ್ಯೆಗಳ ಪರಿಹಾರಕ್ಕೆ ಸೂಚನೆ: ಬಿಸಿಯೂಟ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಪ್ರತೀ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಲು ಕ್ರಮ ವಹಿಸಬೇಕು ಹಾಗೂ ಸೇವೆಯಿಂದ ನಿವೃತ್ತರಾಗಿರುವ 464 ಅಡುಗೆ ಸಿಬ್ಬಂದಿಗೆ 4 ವರ್ಷಗಳಿಂದ ಬಾಕಿ ಇರುವ ಇಡಿಗಂಟು ಅನುದಾನವನ್ನು ಡಿಸೆಂಬರ್ ಅಂತ್ಯದೊಳಗೆ ಪಾವತಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.