ಮದ್ದೂರು ನಗರದ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಪರಶುರಾಮ್ ಸತ್ತಿಗೇರಿ, ಸೋಮಶೇಖರ್ ಇದ್ದರು. 
ಮಂಡ್ಯ

ಸಾರ್ವಜನಿಕ ಕೆಲಸ ವಿಳಂಬ, ನಿರ್ಲಕ್ಷ್ಯ ಮಾಡಿದರೆ ಶಿಸ್ತು ಕ್ರಮ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ
  • ಸಾರ್ವಜನಿಕರ ಅಹವಾಲು ಸ್ವೀಕಾರ
  • ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಾಗುವುದು, ಐಡಿ ಕಾರ್ಡ್ ಧರಿಸುವಿಕೆ, ಸ್ವಚ್ಛತೆ ಕಾಪಾಡುವುದು, ಜನರೊಂದಿಗೆ ಸೌಜನ್ಯದಿಂದ ವರ್ತಿಸುವುದು ಕಡ್ಡಾಯ
ಮದ್ದೂರು : ನಗರದ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಕಚೇರಿಯ ವಿವಿಧ ಶಾಖೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಕಚೇರಿ ಕಾರ್ಯನಿರ್ವಹಣೆ, ಕಡತ ವಿಲೇವಾರಿ, ಸಾರ್ವಜನಿಕ ಸೇವೆಗಳ ಅನುಷ್ಠಾನ ಹಾಗೂ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿದರು. ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿ, ಪ್ರತಿ ಅಹವಾಲನ್ನು ಗಂಭೀರವಾಗಿ ಪರಿಗಣಿಸಿ ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು.
ಇ-ಆಫೀಸ್ ವ್ಯವಸ್ಥೆಯಲ್ಲಿ ಬಾಕಿಯಿರುವ ಎಲ್ಲ ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿ, ಡಿಜಿಟಲ್ ಕಾರ್ಯವಿಧಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು. ಸಾರ್ವಜನಿಕರ ಅನಗತ್ಯ ಅಲೆದಾಟ ತಪ್ಪಿಸುವ ಉದ್ದೇಶದಿಂದ, ಆದಾಯ ಮತ್ತು ಜಾತಿ ಪ್ರಮಾಣಪತ್ರ, ಭೂಹಿಡುವಳಿ ಪ್ರಮಾಣಪತ್ರ, ವಂಶವೃಕ್ಷ, ವಾಸಸ್ಥಳ ಪ್ರಮಾಣಪತ್ರ ಸೇರಿದಂತೆ ಎಲ್ಲ ಸೇವೆಗಳನ್ನು ಸಕಾಲ ಯೋಜನೆಯಡಿ ನಿಗದಿತ ಅವಧಿಯಲ್ಲಿಯೇ ಒದಗಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಿಸಿದ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಚೇರಿಯ ಅಭಿಲೇಖಾಲಯ ಶಾಖೆ ಹಾಗೂ ದಾಖಲೆ ನಿರ್ವಹಣೆಯನ್ನು ಪರಿಶೀಲಿಸಿದ ಡಿಸಿ, ಸಾರ್ವಜನಿಕರು ದಾಖಲೆಗಳನ್ನು ಕೋರಿ ಸಲ್ಲಿಸುವ ಅರ್ಜಿಗಳ ಸಂದರ್ಭದಲ್ಲಿ ಸರ್ಕಾರಕ್ಕೆ ನಿಗದಿತ ಶುಲ್ಕವನ್ನು ಕಡ್ಡಾಯವಾಗಿ ವಸೂಲಿಸಿ, ಸ್ವೀಕರಿಸಿದ ದಿನವೇ ಸರ್ಕಾರಕ್ಕೆ ಜಮಾ ಮಾಡಿ, ದಾಖಲೆಗಳನ್ನು ಸರಿಯಾಗಿ ಸಂರಕ್ಷಿಸುವಂತೆ ಸೂಚಿಸಿದರು. ಜತೆಗೆ ದಾಖಲೆಗಳ ಡಿಜಿಟಲೀಕರಣ ಹಾಗೂ ವ್ಯವಸ್ಥಿತ ಸಂಗ್ರಹಣೆಗೆ ಒತ್ತು ನೀಡುವಂತೆ ತಿಳಿಸಿದರು.
ಹೋಬಳಿ ಮಟ್ಟದ ಎಲ್ಲ ಸಿಬ್ಬಂದಿಯು ಕೇಂದ್ರಸ್ಥಾನದಲ್ಲಿಯೇ ಕಡ್ಡಾಯವಾಗಿ ಲಭ್ಯವಿದ್ದು, ಸಾರ್ವಜನಿಕರ ಮನವಿಗಳಿಗೆ ತ್ವರಿತ ಸ್ಪಂದನೆ ನೀಡಬೇಕೆಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು. ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಾಗುವುದು, ಐಡಿ ಕಾರ್ಡ್ ಧರಿಸುವಿಕೆ, ಸ್ವಚ್ಛತೆ ಕಾಪಾಡುವುದು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಕಡ್ಡಾಯ ಎಂದು ಸೂಚಿಸಿದರು.
ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಆಧಾರ್ ಸೀಡಿಂಗ್, ಇ-ಪೌತಿ ಖಾತಾ ಆಂದೋಲನ, ನಮೂನೆ 1 ರಿಂದ 5, ಗೈರು ವಿಲೆ ಕಡತಗಳ ವಿಲೇವಾರಿ, ಸಕಾಲ ಸೇವೆಗಳು, ನ್ಯಾಯಾಲಯ ಪ್ರಕರಣಗಳು, ಒತ್ತುವರಿ ತೆರವು, ಭೂ ಸುರಕ್ಷ, 11ಇ ತಿದ್ದುಪಡಿ, ಬಗರ್ ಹುಕ್ಕುಂ ಅರ್ಜಿಗಳ ವಿಲೇವಾರಿ ಹಾಗೂ ಹಕ್ಕುಪತ್ರ ವಿತರಣೆಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್  ಸೇರಿದಂತೆ ಇತರರು ಇದ್ದರು.