ಮಂಡ್ಯ ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳೊಂದಿಗೆ ಸಭೆ ಆಯೋಜಿಸಲಾಗಿತ್ತು. 
ಮಂಡ್ಯ

ಸಾಲ ಪಡೆದವರಿಗೆ ಕಿರುಕುಳ ನೀಡಿದರೆ ಶಿಸ್ತು ಕ್ರಮ: ಮೈಕ್ರೋ ಫೈನಾನ್ಸ್‌ಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ Disciplinary action for harassment

ಪ್ರಮುಖ ಮುಖ್ಯಾಂಶಗಳು

  • ಕಿರುಕುಳ ನೀಡಿದರೆ ಶಿಸ್ತು ಕ್ರಮ
  • ಮೈಕ್ರೋ ಫೈನಾನ್ಸ್ ಗಳಿಗೆ ಡಿಸಿ ಎಚ್ಚರಿಕೆ
  • 2 ಲಕ್ಷ ರೂ.ವರೆಗೆ ಜಾಮೀನು ರಹಿತ ಸಾಲವನ್ನು ನೀಡಲು ಅವಕಾಶ
ಮಂಡ್ಯ: ಮೈಕ್ರೋ ಫೈನಾನ್ಸ್‌ಗಳು ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಅದನ್ನು ಮೀರಿ ಸಾಲಗಾರರಿಗೆ ತೊಂದರೆ ನೀಡುವುದು ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಗಳ ವಿವಿಧ ಬೇಡಿಕೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2 ಲಕ್ಷ ರೂ.ವರೆಗೆ ಜಾಮೀನು ರಹಿತ ಸಾಲವನ್ನು ನೀಡಲು ಅವಕಾಶವಿದೆ. ಆದರೆ ಸಾಲ ನೀಡಲು ಜಾಮೀನು ದಾಖಲೆಗಳನ್ನು ಕೇಳುವುದು ಕಂಡು ಬಂದಲ್ಲಿ ಸಂಸ್ಥೆಗಳಿಗೆ ನೋಟಿಸ್ ವಿತರಿಸಲಾಗುವುದು ಎಂದರು.
ಆದಾಯ ತೆರಿಗೆದಾರರ ಪಡಿತರ ಚೀಟಿಯನ್ನು ರದ್ದು ಪಡಿಸಲು ಆದೇಶ ಹೊರಡಿಸಲಾಗಿದೆ. ಅದರಂತೆ ಪಡಿತರ ಚೀಟಿ ರದ್ದು ಪಡಿಸಲಾಗುತ್ತಿದ್ದು, ಕುಟುಂಬದಲ್ಲಿ ಯಾರೇ ಆದಾಯ ತೆರಿಗೆದಾರರಾಗಿದ್ದರೂ ಚೀಟಿ ರದ್ದಾಗುವ ಸಾಧ್ಯತೆಯಿರುತ್ತದೆ. ಈ ಬಗ್ಗೆ ಕುಟುಂಬಸ್ಥರು ಗಮನ ವಹಿಸಿ ಆದಾಯ ತೆರಿಗೆ ನೀಡದ ಪಡಿತರ ಚೀಟಿದಾರರ ಚೀಟಿ ರದ್ದಾಗಿದ್ದಲ್ಲಿ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು. ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನ ಸೌಲಭ್ಯ ಒದಗಿಸುವಲ್ಲಿ ಸಮಸ್ಯೆ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿರುವುದು ದೂರಿನಲ್ಲಿ ಕಂಡು ಬರುತ್ತಿದೆ. ಅರ್ಹ ಫಲಾನುಭವಿಗಳನ್ನು ಅಲೆದಾಡಿಸುವುದು. ನಿರ್ಲಕ್ಷ್ಯತನ ತೋರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಅಕ್ಕಿ ವಿತರಿಸುವಲ್ಲಿ ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಅನೇಕ ದೂರುಗಳು ಕಂಡು ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಎಂದು ಹೇಳಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಸಂಘಟನೆಯ ಮುಖಂಡರಾದ ಭರತ್‌ರಾಜ್, ಸುನೀತಾ, ಶೋಭಾ ಇತರರಿದ್ದರು.