ಮಳವಳ್ಳಿ ತಾಲೂಕಿನ ಅಮೃತೇಶ್ವರನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯ ವರ್ತನೆ ವಿರುದ್ಧ ಪಾಲಕರು ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.  
ಮಂಡ್ಯ

ಮುಖ್ಯ ಶಿಕ್ಷಕಿ ವರ್ತನೆಗೆ ಬೇಸರ

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
  • ಮಕ್ಕಳಿಗೆ ಸಾಮೂಹಿಕ ವರ್ಗಾವಣೆ ನೀಡುವಂತೆ ಆಗ್ರಹ
ಮಳವಳ್ಳಿ; ತಾಲೂಕಿನ ಅಮೃತೇಶ್ವರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವರ್ತನೆಯಿಂದ ಬೇಸತ್ತ ಪಾಲಕರು ತಮ್ಮ ಮಕ್ಕಳಿಗೆ ಸಾಮೂಹಿಕ ವರ್ಗಾವಣೆ ನೀಡುವಂತೆ ಆಗ್ರಹಿಸಿ ಬುಧವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟವೀರಮ್ಮ ವಿರುದ್ಧ ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಾಲಕರೊಬ್ಬರಾದ ಸೋಮಶೇಖರ್ ಮಾತನಾಡಿ, ಶಾಲೆ ದಾಖಲಾತಿ ಕೊರತೆಯಿಂದ ಹಲವು ವರ್ಷಗಳ ಹಿಂದೆ ಮುಚ್ಚುವ ಸ್ಥಿತಿಯಲ್ಲಿತ್ತು. ಆದರೇ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಿ ಸರ್ಕಾರಿ ಶಾಲೆಯನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಗ್ರಾಮದ ಯುವಕರು ಕಳೆದ ಹಲವು ವರ್ಷಗಳಿಂದ ಅಮೃತ ಚಾರಿಟಬಲ್ ಟ್ರಸ್ಟ್ ನಿರ್ಮಿಸಿಕೊಂಡು ಶಾಲೆಯ ಎಸ್‌ಡಿಎಂಸಿ ಸಮಿತಿಯ ಜತೆಗೂ 143 ಮಕ್ಕಳನ್ನು ದಾಖಲಾತಿ ಮಾಡಿಸಿದ್ದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಟ್ರಸ್ಟ್ ವತಿಯಿಂದ ಕೊರತೆ ಇರುವ ಶಿಕ್ಷಕರ ನೇಮಾಕಾತಿ ಮಾಡಿ ವೇತನ ಭರಿಸುವುದರ ಜತೆಗೆ ಶಾಲೆಯ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿತ್ತು. ಆದರೇ ಇತ್ತೀಚೆಗೆ ಶಾಲೆ ಮುಖ್ಯ ಶಿಕ್ಷಕಿಯಾಗಿ ಬಂದಿದ್ದ ಪುಟ್ಟವೀರಮ್ಮ ಮಕ್ಕಳಿಗೆ ಗುಣಮಟ್ಟವಿಲ್ಲದ ಬಿಸಿಯೂಟ ನೀಡುವುದು ಸೇರಿದಂತೆ ಮಕ್ಕಳ ಮನಸ್ಥಿತಿ ಮೇಲೆ ದುಷ್ಪರಿಣಾಮ ಬೀರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು ಎಂದು ಬೇಸರ ವ್ಯಕ್ತ ಪಡಿಸಿದರು.
ಈ ನಡೆಯನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಲು ಶಾಲೆಗೆ ತೆರಳಿದ್ದ ಎಸ್‌ಡಿಎಂಸಿ ಸಮಿತಿ ಹಾಗೂ ಪಾಲಕರನ್ನು ನಿಮ್ಮ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು. ಶಿಕ್ಷಕಿಯ ಈ ವರ್ತನೆಯಿಂದ ಆತಂಕಗೊಂಡು ಶಿಕ್ಷಕಿಗೆ ಬುದ್ದಿ ಹೇಳುವಂತೆ ಬಿಇಒ ರವರಿಗೆ ಎಸ್‌ಡಿಎಂ ಸಿ ಸಮಿತಿ ವತಿಯಿಂದ ದೂರು ಸಲ್ಲಿಸಲಾಗಿತ್ತು. ಅದರಂತೆ ಶಿಕ್ಷಣ ಸಂಯೋಜಕರು ಶಾಲೆಗೆ ಅಗಮಿಸಿ ಸಭೆ ನಡೆಸಿ ಶಿಕ್ಷಕಿಗೆ ತಿಳಿ ಹೇಳಿ ತೆರಳಿದರೂ. ತನ್ನ ಅನುಚಿತ ವರ್ತನೆಯನ್ನು ಮುಂದುವರಿಸಿದ್ದರು. ಇದರಿಂದ ಬೇಸತ್ತು ಮುಖ್ಯ ಶಿಕ್ಷಕಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆದರೇ ಶಿಕ್ಷಕಿ ಪುಟ್ಟವೀರಮ್ಮ ಬಿಇಒ ಸೇರಿದಂತೆ ಎಸ್‌ಡಿಎಂಸಿ ಸಮಿತಿ ಹಾಗೂ ಪಾಲಕರ ವಿರುದ್ಧ ಕಿರುಕುಳ ಆರೋಪಮಾಡಿ ಪ್ರತಿ ದೂರು ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರಿ ಶಾಲೆಗಳು ಮುಚ್ಚದಂತೆ ಇಡೀ ಗ್ರಾಮವೇ ಒಮ್ಮತದಿಂದ ಶ್ರಮಿಸುತ್ತಿರುವಾಗ ಮುಖ್ಯ ಶಿಕ್ಷಕಿ ಪುಟ್ಟವೀರಮ್ಮ ಅನುಚಿತ ವರ್ತನೆ ಬೇಸರ ಉಂಟುಮಾಡಿದ್ದು, ಇಂತಹ ಶಿಕ್ಷಕರಿಂದ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ನಿರೀಕ್ಷೆ ಇಲ್ಲದಂತಾಗಿದೆ. ಹಾಗಾಗಿ ಕೂಡಲೇ ಶಾಲೆಯ ಮುಖ್ಯ ಶಿಕ್ಷಕಿಯನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳಿಗೆ ವರ್ಗಾವಣೆ ನೀಡುವಂತೆ ಒತ್ತಾಯಿಸಿ ಸಾಮೂಹಿಕ ವರ್ಗಾವಣೆ ಅರ್ಜಿಗಳನ್ನು ಹಿಡಿದು ಪಾಲಕರು ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಿಇಒ ಅನುಪಸ್ಥಿಯಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ಅರ್ಜಿಗಳನ್ನು ಸ್ವೀಕರಿಸಿ ಈ ವಿಚಾರವಾಗಿ ಮೇಲಧಿಕಾರಿಗಳಿಗೆ ವರದಿ ನೀಡುವ ಮೂಲಕ ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡಿಕೊಡುವ ಭರವಸೆ ನೀಡಿದ ನಂತರ ಧರಣಿ ಕೈ ಬಿಡಲಾಯಿತು.