ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಮಾತನಾಡಿದರು. 
ಮಂಡ್ಯ

ಪೌರಕಾರ್ಮಿಕರಿಗೆ ಸೌಲಭ್ಯ ಸಮರ್ಪಕವಾಗಿ ತಲುಪಿಸಿ: ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ
  • ಹಾಲಹಳ್ಳಿ ಶ್ರಮಿಕನಗರ ಮತ್ತು ಪಿ.ಕೆ ಕಾಲನಿಗೆ ಭೇಟಿ
ಮಂಡ್ಯ: ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯ,ಸವಲತ್ತುಗಳನ್ನು ನಿಗದಿತ ಕಾಲಮಿತಿಯಲ್ಲಿ ಸಮರ್ಪಕವಾಗಿ ತಲುಪಿಸಲು ಮುಂದಾಗುವಂತೆ ಅಧಿಕಾರಿಗಳಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಸೂಚನೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರೊಡನೆ ನೇರ ಸಂವಾದ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಗಳನ್ವಯ ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ತಲುಪಿಸು ವಿಚಾರದಲ್ಲಿ ನಿರ್ಲಕ್ಷೃ ವಹಿಸಿದಲ್ಲಿ ಆಯೋಗದ ವತಿಯಿಂದ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ತಾಕೀತು ಮಾಡಿದರು.
ಪ್ರತಿನಿತ್ಯ ನಗರ ಸ್ವಚ್ಛತೆ ಮಾಡುವ ಪೌರಕಾರ್ಮಿಕರ ಹಿತ ಕಾಪಾಡಲು ನಗರಸಭೆ ಬದ್ಧವಾಗಿರಬೇಕು. ಪೌರಕಾರ್ಮಿಕರ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ಪ್ರತಿ ತಿಂಗಳ 5 ರೊಳಗೆ ವೇತನ ಪಾವತಿಸಬೇಕು. ಸಮವಸ್ತ್ರ, ಕೈಗೌಸ್, ಗಮ್‌ಬೂಟ್, ಮಾಸ್ಕ್ ಸೇರಿದಂತೆ ಆರೋಗ್ಯ ಸುರಕ್ಷಾ ಪರಿಕರಗಳನ್ನು ಸಮರ್ಪಕವಾಗಿ ಒದಗಿಸಬೇಕು. ಹೊರಗುತ್ತಿಗೆ ನೇಮಕದಲ್ಲಿನ ಮಾನದಂಡಗಳನ್ನು ಏಜೆನ್ಸಿದಾರರು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ಏಜೆನ್ಸಿದಾರರಿಗೆ ನೋಟಿಸ್ ಜಾರಿಗೊಳಿಸಿ ಕಪ್ಪುಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು. ಗುಣಮಟ್ಟದ ಬೆಳಗಿನ ಉಪಹಾರ ನೀಡಬೇಕು. ಗುರುತಿನ ಚೀಟಿ ನೀಡಬೇಕು. ಇಎಸ್‌ಐ ಮತ್ತು ಪಿಎಫ್ ಕ್ರಮಬದ್ಧವಾಗಿ ಕಟಾವಣೆಯಾಗಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಪೌರಾಯುಕ್ತೆ ಯು.ಪಿ.ಪಂಪಶ್ರೀ, ಸಿ.ಶಂಕರ್, ರುದ್ರೇಗೌಡ ಇತರರಿದ್ದರು. ಸಭೆಗೂ ಮುನ್ನ ಶಂಕರ ಅಂಕನಶೆಟ್ಟಿಪುರ ಅವರು ಹಾಲಹಳ್ಳಿ ಶ್ರಮಿಕನಗರ ಮತ್ತು ಪಿ.ಕೆ ಕಾಲನಿಗೆ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆ ಹಾಗೂ ಕುಂದುಕೊರತೆ ಆಲಿಸಿದರು. ಅಂತೆಯೇ ನೆಹರು ನಗರಕ್ಕೆ ಭೇಟಿ ನೀಡಿ ಪೌರಕಾರ್ಮಿಕರಿಗೆ ಹಕ್ಕು ಪತ್ರ ವಿತರಣೆ ಕುರಿತು ಸಮಸ್ಯೆ ಪರಿಶೀಲಿಸಲಾಯಿತು. ಹಾಗೂ ಪೌರಕಾರ್ಮಿಕರಿಗಾಗಿ ಸಮುದಾಯ ಭವನವನ್ನು ನಿರ್ಮಾಣದ ಲೋಪದೋಷ ಹಾಗೂ ಹಾಲಹಳ್ಳಿಯಲ್ಲಿ ಶ್ರಮಿಕನಗರದಲ್ಲಿ ನಿರ್ಮಿಸಿರುವ ಮನೆ ಕಾಮಗಾರಿ ಪರಿಶೀಲನೆ ಮಾಡಲಾಯಿತು.