ಶ್ರೀರಂಗಪಟ್ಟಣದ ಓಂ ಶ್ರೀನಿಕೇತನ ಶಾಲೆ ಮತ್ತು ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭವನ್ನು ಆಡಳಿತಾಧಿಕಾರಿ ಡಾ.ಆಶಾಲತಾ ಪುಟ್ಟೇಗೌಡ ಉದ್ಘಾಟಿಸಿದರು. ಸಂಕ್ರಾಂತಿ ಮಂಜುರಾಮ್, ಪಿ.ಮಂಜುರಾಮ್, ಶಿವಕುಮಾರ್ ಇತರರಿದ್ದರು.
- ಶಿಕ್ಷಕರಿಗೆ ಡಾ.ಆಶಾಲತಾ ಪುಟ್ಟೇಗೌಡ ಸಲಹೆ
ಶ್ರೀರಂಗಪಟ್ಟಣ: ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಶೈಕ್ಷಣಿಕ ಕ್ರಮದ ಜತೆಗೆ ಕೌಶಲ ಗುಣವನ್ನೂ ಬೆಳಸಬೇಕಿದೆ ಎಂದು ಓಂ ಶ್ರೀನಿಕೇತನ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಆಶಾಲತಾ ಪುಟ್ಟೇಗೌಡ ತಿಳಿಸಿದರು.
ಪಟ್ಟಣದ ಓಂ ಶ್ರೀನಿಕೇತನ ಟ್ರಸ್ಟ್ ಶಾಲೆ ಮತ್ತು ಕಾಲೇಜಿಗೆ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗಾಗಿ (ಬ್ಲೂಮ್) ಎಂಬ ಶೀರ್ಷಿಕೆಯಡಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಎಂದರೆ ಪಠ್ಯಕ್ರಮ ವಲ್ಲ. ಬದಲಾಗಿ ಕಲೆ, ಸಾಂಸ್ಕೃತಿಕ, ಕೌಶಲ, ಕ್ರೀಡೆ ಹಾಗೂ ಚತುರತೆಯಂತಹ ಪ್ರತಿಭಾನ್ವೇಷಣೆಯನ್ನು ಪತ್ತೆ ಹಚ್ಚುವ ಕೆಲಸ ಶಿಕ್ಷಕರಿಂದಾ ಗಬೇಕು. ಮಕ್ಕಳನ್ನು ಶಾಲೆಯ ಪ್ರತಿನಿಧಿಯನ್ನಾಗಿ ಮಾಡುವುದರಿಂದ ಅವರಲ್ಲಿ ಧೈರ್ಯ ಮೂಡುತ್ತದೆ. ನಂತರ ಅವರು ಶಾಲಾ ಚುನಾವಣೆಗಳಲ್ಲಿ ಭಾಗವಹಿಸಬಹುದು ಎಂದರು.
ಶಾಲೆಯ ಮಕ್ಕಳ ಕಲ್ಯಾಣಾಧಿಕಾರಿ ಸಂಕ್ರಾಂತಿ ಮಂಜುರಾಮ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮೊಳಗಿರುವ ಭಯ ಹಾಗೂ ಸಂಕುಚಿತ ಭಾವನೆ ತೊರೆದು ಆಸೆ, ಆಸಕ್ತಿ ಹಾಗೂ ಸಿಗುವ ಅವಕಾಶಗಳನ್ನು ಬಳಸಿಕೊಂಡು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದರು.
ಶಾಲೆಯ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಪಿ.ಮಂಜುರಾಮ್, ಪ್ರಾಂಶುಪಾಲ ಶಿವಕುಮಾರ್ ಇತರರಿದ್ದರು.