ಬುಯ್ಯನ ದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿರುವುದು. ಉಮಾ, ಮಲ್ಲಿಕಾರ್ಜುನ, ಶಿವಶಂಕರ, ದಾಸೇಗೌಡ, ನಾಗರಾಜು ಇತರರಿದ್ದರು.
- ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಹೇಳಿಕೆ
ಹಲಗೂರು: ಪ್ರಸ್ತುತ ಶೈಕ್ಷಣಿಕ ಸಾಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನುರಿತ ಶಿಕ್ಷಕರಿಂದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ ಎಂದು ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ತಿಳಿಸಿದರು.
ಸಮೀಪದ ಬುಯ್ಯನ ದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ಸಂಭ್ರಮ 2025- 26ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಂದಲೇ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿಸುವುದು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಚಟುವಟಿಕೆ ಆಧಾರಿತ ಕಲಿಕೆಗೆ ಪ್ರಾಮುಖ್ಯತೆ ಇದೆ, ಏಕೆಂದರೆ ವಿದ್ಯಾರ್ಥಿಗಳು ಪ್ರಯೋಗಿಕವಾಗಿ ಕಲಿತು ಅನುಭವಗಳಿಸಿ ಅರ್ಥ ಮಾಡಿಕೊಂಡು ಸ್ವಂತ ಸಾಮರ್ಥ್ಯದಿಂದ ಬರೆಯಲು ಸಾಧ್ಯವಾಗುತ್ತದೆ ಎಂದರು.
ಇಲಾಖೆ ವತಿಯಿಂದ ವರ್ಷಕ್ಕೆ 60 ದಿನಗಳ ಕಾಲ ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನಾ ತರಬೇತಿ ನೀಡಲಾಗುತ್ತಿದೆ. ಇದರಿಂದ ಅವರಿಗೆ ತರಗತಿಯಲ್ಲಿ ಪ್ರತಿಯೊಂದು ಮಗುವಿಗೆ ಯಾವ ರೀತಿ ಬೋಧನೆ ಮಾಡಬೇಕು ಎಂಬುದು ತಿಳಿಯುತ್ತದೆ. ಆದುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವಂತೆ ಪಾಲಕರಿಗೆ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಶಾಲಾ ಸಂಭ್ರಮ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಒಂದು ಕಾರ್ಯಕ್ರಮ .ಶಾಲೆಯಲ್ಲಿ ನಡೆಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಅವರ ಜ್ಞಾನಾರ್ಜನೆ ಹೆಚ್ಚುತ್ತದೆ ಎಂದರು .
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಐಶ್ವರ್ಯ, ಬಿ. ಸಿ. ಲಾವಣ್ಯ, ಕೆ. ವೇದ, ಶಾಲಿನಿ ,ಬಿ.ಕೆ.ಪುಷ್ಪಲತಾ, ನಂದೀಶ್, ಅಜಯ್ ಇವರಿಗೆ ಶಾಲಾವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಶಿವಶಂಕರ, ದಾಸೇಗೌಡ, ನಾಗರಾಜು, ಮುಖ್ಯ ಶಿಕ್ಷಕ ವಿಷಕಂಠೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಸ್ವಾಮಿ, ಉಪಾಧ್ಯಕ್ಷ ರಂಜಿತ್ ಪ್ರಕಾಶ್, ಶಿಕ್ಷಕ ರಾಘವೇಂದ್ರ, ಸಿಆರ್‌ಪಿಯ ಪುಟ್ಟರಾಜು, ಜಿ.ಎಸ್.ಕೃಷ್ಣ, ಗ್ರಾಮದ ಮುಖಂಡ ಕೃಷ್ಣೇಗೌಡ ಇತರರು ಇದ್ದರು .