ಮಂಡ್ಯದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಕೈಮಗ್ಗ ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರಕುಮಾರ್ ಉದ್ಘಾಟಿಸಿದರು.
- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಣೆ
- ನಗರದ ಗಾಂಧಿಭವನದಲ್ಲಿ ಆಯೋಜನೆ
ಮಂಡ್ಯ: ದೇವರ ದಾಸಿಮಯ್ಯ ಅವರ ವಚನಗಳು ಸಂಕ್ಷಿಪ್ತತೆ, ಸರಳತೆ ಮತ್ತು ಗಹನವಾದ ಅರ್ಥ ಪ್ರಚುರತೆಗೆ ಹೆಸರುವಾಸಿಯಾಗಿತ್ತು. ಜತೆಗೆ ಸಮಾಜದ ಅಂಕು ಡೊಂಕು ಹಾಗೂ ಬಾಹ್ಯ ಆಚರಣೆಗಳನ್ನು ನೇರವಾಗಿ ಪ್ರಶ್ನಿಸುತ್ತಿದ್ದರು ಎಂದು ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ದೇವರ ದಾಸಿಮಯ್ಯ ಅವರ ಆದರ್ಶ ಮತ್ತು ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು. ಅವರು ಸಮಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನೇಕ ವಚನಗಳ ಮೂಲಕ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೈಮಗ್ಗ ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರಕುಮಾರ್ ಮಾತನಾಡಿ, ದೇವರ ದಾಸಿಮಯ್ಯ ಅವರು ಸಮಾಜದಲ್ಲಿನ ಮೂಢನಂಬಿಕೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸತ್ಯ ಮತ್ತು ಅನುಭವಕ್ಕೆ ಪ್ರಾಮುಖ್ಯತೆ ನೀಡಿದವರು. ಸಾಮಾಜಿಕ ವ್ಯವಸ್ಥೆ ಮತ್ತು ಕ್ರಾಂತಿಗೆ ಅಡಿಪಾಯ ಹಾಕಿದವರು. ಅವರ ಮೌಲ್ಯ ಆದರ್ಶ ಗಳನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಡಾ.ಶ್ರೀನಿವಾಸ ಶೆಟ್ಟಿ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಜಿಲ್ಲಾ ನೇಕಾರ ಸಂಘದ ಅಧ್ಯಕ್ಷ ಹರಿಪ್ರಸಾದ್, ಉಪಾಧ್ಯಕ್ಷ ರಾಧಾಕೃಷ್ಣನ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಮುಖಂಡರಾದ ಸೌಮ್ಯಾಪ್ರಸಾದ್, ಸೂರ್ಯನಾರಾಯಣ, ರಾಮಕುಮಾರ್, ನೀಲಕಂಠ, ಉಮಾಶಂಕರ್ ಇತರರಿದ್ದರು.