ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಭಾರಿ ದನಗಳ ಜಾತ್ರೆಯಲ್ಲಿ ಮಾರಾಟ ಮತ್ತು ಪ್ರದರ್ಶನವಾಗುತ್ತಿರುವ ರಾಸುಗಳು. 
ಮಂಡ್ಯ

ದೇಸಿ ರಾಸುಗಳಿಂದ ಜಾತ್ರೆಗೆ ಮೆರಗು

ಪ್ರಮುಖ ಮುಖ್ಯಾಂಶಗಳು

  • ಪಾಂಡವಪುರದ ಬೇಬಿ ಬೆಟ್ಟದಲ್ಲಿ ಹಳ್ಳಿಕಾರ್ ತಳಿಗಳ ಪ್ರದರ್ಶನ
  • ನೋಡುಗರ ಮೆಚ್ಚುಗೆಗೆ ಪಾತ್ರ
ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಅಮೃತ್ ಮಹಲ್ ಕಾವಲ್ ಪ್ರದೇಶದಲ್ಲಿ ನಡೆಯುತ್ತಿರುವ ಐತಿಹಾಸಿಕ, ಪುರಾಣ ಪ್ರಸಿದ್ಧ ಭಾರಿ ದನಗಳ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ದೇಸಿ ತಳಿಗಳ ರಾಸುಗಳ ದಂಡೇ ಹರಿದುಬಂದಿದೆ. ಭಾಗವಹಿಸಿದ್ದ ದೇಸಿ ರಾಸುಗಳು ತಮ್ಮ ಮೈಮಾಟದಿಂದ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತಲ್ಲದೆ, ಜಾತ್ರೆಗೆ ವಿಶೇಷ ಮೆರಗು ನೀಡಿತು.
ತಾಲೂಕಿನ ಬೇಬಿ ಬೆಟ್ಟದ ಭಾರಿ ದನಗಳ ಜಾತ್ರೆ ಹಳೆ ಮೈಸೂರು ಪ್ರಾಂತ್ಯದಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದು, ಐತಿಹಾಸಿಕೆ ಹಿನ್ನೆಲೆ ಪಡೆದುಕೊಂಡಿದೆ. ಮೈಸೂರು ಅರಸರುಗಳಲ್ಲಿ ಪ್ರಖ್ಯಾತಿ ಗಳಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಸುಗಳ ಮೇಲಿನ ವಿಶೇಷ ಪ್ರೀತಿ ಹೊಂದಿದ್ದ ಪರಿಣಾಮ, ಶತಮಾನದ ಹಿಂದೆ ಬೇಬಿ ಬೆಟ್ಟದ ಅಮೃತಮಹಲ್ ಕಾವಲ್ ಪ್ರದೇಶದಲ್ಲಿ ದೇಸಿ ತಳಿ ದನಗಳ ಜಾತ್ರೆ ಪ್ರಾರಂಭಿಸಿದ್ದರು. ಮೈಸೂರು ಅರಸರು ರೂಢಿಸಿಕೊಂಡು ಬಂದಿದ್ದ ಜಾತ್ರೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ತಾಲೂಕು ಆಡಳಿತ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಪಶು ಸಂಗೋಪನಾ ಇಲಾಖೆ ಸೇರಿದಂತೆ, ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷರ ಸಾನ್ನಿಧ್ಯದಲ್ಲಿ ಶಿವರಾತ್ರಿ ದಿನದಂದು ಆರಂಭಗೊಂಡು 8 ದಿನ ವಿಜೃಂಭಣೆಯಿಂದ ನಡೆಯುತ್ತದೆ.
ರಾಜ್ಯದ ವಿವಿಧ ಮೂಲೆಗಳಿಂದ ವಿವಿಧ ದೇಸಿ ತಳಿಯ ರಾಸುಗಳು ಜಾತ್ರೆಗೆ ಆಗಮಿಸಿ ಮಾರಾಟ ಮತ್ತು ಪ್ರದರ್ಶನಕ್ಕೆ ಒಳಪಡುತ್ತವೆ. ಸುಮಾರು ಎರಡು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ದೇಸಿ ತಳಿ ಹಳಿಕಾರ್ ರಾಸುಗಳ ಮೈಮಾಟದ ಸೌಂದರ್ಯ ಸವಿಯಲು ಆಗಮಿಸುವ ಜನರು ಒಂದೆಡೆಯಾದರೆ, ದೇಸಿ ತಳಿ ರಾಸುಗಳನ್ನು ಖರೀದಿಸಿ ಅದನ್ನು ಸಾಕುವ ಹಂಬಲ ಇರುವ ರೈತರು ಜಾತ್ರೆಗೆ ಆಗಮಿಸಿ ತಮ್ಮ ಹಣಕಾಸಿನ ಅನುಕೂಲಕ್ಕೆ ತಕ್ಕಂತೆ ಅಗತ್ಯವಾದ ರಾಸುಗಳನ್ನು ಖರೀದಿಸುತ್ತಾರೆ. ಇಲ್ಲಿಗೆ ಆಗಮಿಸುವ ರಾಸುಗಳ ಬೆಲೆ ಲಕ್ಷದಿಂದ ಹತ್ತು ಲಕ್ಷೃಕ್ಕೂ ಹೆಚ್ಚು ಬೆಲೆ ಬಾಳುವ ರಾಸುಗಳು ಇಲ್ಲಿ ಮಾರಾಟವಾಗುತ್ತದೆ.
ಭಾಗವಹಿಸುವ ರಾಸುಗಳು: ಜಾತ್ರೆಯಲ್ಲಿ ಹಾಲು ಹಲ್ಲಿನ ಜೋಡಿ ಕರು, ಎರಡು ಹಲ್ಲಿನ ಜೋಡಿ ಎತ್ತುಗಳು, ನಾಲ್ಕು ಹಲ್ಲಿನ ಜೋಡಿ ಎತ್ತು, ಆರು ಹಲ್ಲಿನ ಜೋಡಿ ಎತ್ತು, ಬಾಯಿಗೂಡಿದ ಜೋಡಿ ಎತ್ತು, ಹಾಲು ಹಲ್ಲಿನ ಜೋಡಿ ಕಡಸು, ಎರಡು, ನಾಲ್ಕು, ಆರು ಹಲ್ಲಿನ ಜೋಡಿ ಕಡಸು ಹೀಗೆ ಹಲವು ರೀತಿಯ ರಾಸುಗಳ ಪ್ರದರ್ಶನ ಮತ್ತು ಮಾರಾಟವಾಗುವ ಜತೆಗೆ ಉತ್ತಮ ರಾಸುಗಳ ಆಯ್ಕೆಯಲ್ಲಿ ಭಾಗವಹಿಸಿ ಉತ್ತಮ ರಾಸುಗಳು ಚಿನ್ನದ ಬಹುಮಾನಕ್ಕೆ ಅರ್ಹವಾಗುತ್ತವೆ. ರೈತರು ಚಿನ್ನದ ಬಹುಮಾನ ಪಡೆಯುವುದಕೋಸ್ಕರ ತಮ್ಮ ರಾಸುಗಳನ್ನು ದಷ್ಟ, ಪುಷ್ಟವಾಗಿ ಬೆಳೆಸಿ ಜಾತ್ರೆಗೆ ಕರೆತರುತ್ತಾರೆ.
ಹೋರಿಗೆ ಹೆಚ್ಚಿನ ಬೇಡಿಕೆ:
ಹಳ್ಳೀಕಾರ್ ತಳಿ ಮತ್ತು ಬೀಜದ ಹೋರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ರಾಜ್ಯದ ಇತರೆ ಭಾಗಗಳಿಂದ ಆಗಮಿಸಿರುವ ರಾಸುಗಳ ಜತೆಗೆ ಪಾಂಡವಪುರ ತಾಲೂಕಿನ ರಾಸುಗಳು ಪೈಪೋಟಿಗೆ ನೀಡಿದ್ದವು. ಒಂದಕ್ಕಿಂತ ಒಂದು ಸುಂದರ ಮತ್ತು ದಷ್ಟ, ಪುಷ್ಟ ರಾಸುಗಳು ಪ್ರದರ್ಶನ ನಡೆಯುತ್ತಿದ್ದು, ಕೊಳ್ಳುವವರು ಯಾವ ಎತ್ತುಗಳನ್ನು ಕೊಳ್ಳುವುದು ಎಂಬ ಗೊಂದಲಕ್ಕೀಡಾಗುತ್ತಿದ್ದರು. ಇಷ್ಟವಾದ ಹಸುಗಳಿಗೆ ಚೌಕಾಸಿ ನಡೆಸಿ ವ್ಯಾಪಾರ ಕುಂದುರಿಸುತ್ತಿದ್ದರು.
ಉತ್ತಮ ಜೋಡೆತ್ತುಗಳಿಗೆ ಬಹುಮಾನ
ಸಾವಯವ ಕೃಷಿಯಲ್ಲಿ ಸಾಧನೆಗೈದಿರುವ ಪಾಂಡವಪುರ ತಾಲೂಕಿನ ಶ್ಯಾದನಹಳ್ಳಿ ತಾಲೂಕಿನ ಗ್ರಾಮದ ಕೃಷಿಕ ಚಲುವರಾಜು 6 ಲಕ್ಷ ಮೌಲ್ಯದ ಆರು ಹಲ್ಲಿನ ಹಳೀಕಾರ್ ತಳಿಯ ಜೋಡೆತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಶೃಗಾರಗೊಂಡ ವಧುವಿನಂತೆ ಕಂಗೊಳಿಸುತ್ತದ್ದ ಈ ಎತ್ತುಗಳು ಜಾತ್ರೆಗೆ ಆಗಮಿಸಿದ ಜನರ ಗಮನ ಸೆಳೆಯುತ್ತಿದ್ದು ವಿಶೇಷವಾಗಿತ್ತು. ವರ್ಷದಿಂದ ವರ್ಷಕ್ಕೆ ಬೇಬಿ ಬೆಟ್ಟದ ಜಾತ್ರೆ ಕಳೆಗಟ್ಟುತ್ತಿದ್ದು, ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯದ ಬಳಿಕ ಜಾತ್ರೆ ಬಗ್ಗೆ ವಿಶೇಷ ಕಾಳಿಜಿ ವಹಿಸಿರುವ ಪರಿಣಾಮ ಈ ಹಿಂದಿಗಿಂತಲೂ ಹೆಚ್ಚು ರಾಸುಗಳು ಜಾತ್ರೆಗೆ ಆಗಮಿಸುತ್ತವೆ. ಇದು ಸಂತಸದ ವಿಚಾರ ಎಂದು ರೈತ ಶ್ಯಾದನಹಳ್ಳಿ ಚಲುವರಾಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಫೆ.23 ರಂದು ಜಾತ್ರೆ ಸಂಪನ್ನವಾಗಲಿದ್ದು, ಪಶು ಸಂಗೋಪನಾ ಇಲಾಖೆ ವೈದ್ಯರು ಫೆ.21 ರಂದು ಉತ್ತಮ ಜೊಡೆತ್ತುಗಳ ಆಯ್ಕೆ ಮಾಡಲಿದ್ದಾರೆ. ಫೆ.23 ರಂದು ಆಯ್ಕೆಯಾದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು. ಅದೇ ದಿನ ಮಾದೇಶ್ವರ ಮತ್ತು ಸಿದ್ದೇಶ್ವರರ ರಥೋತ್ಸವ ನಡೆಯಲಿದ್ದು, ರಾತ್ರಿ ತೆಪ್ಪೋತ್ಸವ ಜರುಗಲಿದೆ.