ಮಂಡ್ಯದಲ್ಲಿ ಜಿಪಂ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಇಲಾಖಾ ವಿಚಾರಣೆಗಳ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ವಿಚಾರಣೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಮಂಡ್ಯ: ಪ್ರತಿ ಪ್ರಕರಣದಲ್ಲೂ ಸತ್ಯಾಂಶವನ್ನು ಪತ್ತೆಹಚ್ಚುವ ಉದ್ದೇಶದಿಂದ ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ವಿಚಾರಣೆ ನಡೆಸುವಂತೆ ವಿಚಾರಣಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.

ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಶಿಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ಇಲಾಖಾ ವಿಚಾರಣೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಚಾರಣೆಗಳು ಅನಗತ್ಯವಾಗಿ ವಿಳಂಬವಾಗುವುದರಿಂದ ಆಡಳಿತದ ದೈನಂದಿನ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತದೆ. ಆದ್ದರಿಂದ, ನಿಗದಿತ ಅವಧಿಯೊಳಗೆ ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ತಿಳಿಸಿದರು.
ಸರ್ಕಾರದ ನಿಯಮಾನುಸಾರ ಇಲಾಖಾ ವಿಚಾರಣೆಗಳನ್ನು ಒಂಬತ್ತು ತಿಂಗಳ ಅವಧಿಯೊಳಗೆ ಪೂರ್ಣಗೊಳಿಸಲು ಅವಕಾಶವಿದೆ. ಆದ್ದರಿಂದ ಎಲ್ಲ ವಿಚಾರಣಾಧಿಕಾರಿಗಳು ಆ ಕಾಲಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಂತಿಮ ವರದಿಯನ್ನು ಸಲ್ಲಿಸಬೇಕು. ಹಲವು ಪ್ರಕರಣಗಳ ಮಾಹಿತಿಯನ್ನು ಲೋಕಾಯುಕ್ತ ಹಾಗೂ ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಬೇಕಿರುವುದರಿಂದ ಕಾಲಮಿತಿಯನ್ನು ಗಮನದಲ್ಲಿಟ್ಟುಕೊಂಡು ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಿಚಾರಣೆಯ ವೇಳೆ ದೂರುದಾರರ ಆರೋಪಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಮರ್ಥನೆ ಎರಡನ್ನೂ ಸಮಗ್ರವಾಗಿ ಪರಿಶೀಲಿಸಿ ನ್ಯಾಯೋಚಿತ ವರದಿ ಸಲ್ಲಿಸಬೇಕು ಎಂದು ಹೇಳಿದರು.
ವಿಚಾರಣಾಧಿಕಾರಿಗಳ ವರ್ಗಾವಣೆಯಾದಲ್ಲಿ ಹೊಸದಾಗಿ ನೇಮಕವಾಗುವವರಿಗೆ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಆರಂಭದಿಂದಲೇ ವಿಚಾರಣೆ ನಡೆಸಿ ಕಾನೂನುಬದ್ಧವಾಗಿ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಗಂಭೀರ ಸ್ವರೂಪದ ಪ್ರಕರಣಗಳಿಗೆ ಮೊದಲ ಆದ್ಯತೆ ನೀಡಿ, ಅವುಗಳ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಪ್ರತಿ ವಿಚಾರಣಾಧಿಕಾರಿಗೆ ಪ್ರಕರಣವಾರು ಗಡುವಿನ ದಿನಾಂಕ ನಿಗದಿಪಡಿಸಲಾಗಿದ್ದು, ನಿಗದಿತ ದಿನಾಂಕದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ವಿಚಾರಣೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳು ವಿಳಂಬವಿಲ್ಲದೆ ವಿಚಾರಣಾಧಿಕಾರಿಗೆ ಒದಗಿಸಬೇಕು. ವಿಚಾರಣೆಗೆ ನಿಗದಿಪಡಿಸಿದ ದಿನಾಂಕದಲ್ಲಿ ಸಂಬಂಧಪಟ್ಟವರು ಖುದ್ದಾಗಿ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ವಿಡಿಯೋ ಸಂವಾದದ ಮೂಲಕ ವಿಚಾರಣೆ ನಡೆಸಿ ವರದಿ ಪಡೆಯಬಹುದಾಗಿದೆ. ಈಗಾಗಲೇ ವಿಳಂಬವಾಗಿರುವ ಪ್ರಕರಣಗಳ ಕುರಿತು ಸಂಬಂಧಪಟ್ಟವರು ವಿಳಂಬಕ್ಕೆ ಕಾರಣವನ್ನು ಲಿಖಿತವಾಗಿ ಸಲ್ಲಿಸುವುದರೊಂದಿಗೆ ಅಂತಿಮ ವರದಿ ಸಲ್ಲಿಸುವ ದಿನಾಂಕವನ್ನು ತಿಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ(ಆಡಳಿತ) ಡಾ.ಶಿವಲಿಂಗಯ್ಯ, ಮುಖ್ಯಲೆಕ್ಕಾಧಿಕಾರಿ ಶ್ರೀನಿವಾಸ್‌ನಾಯಕ್ ಇದ್ದರು.