ಶ್ರೀರಂಗಪಟ್ಟಣದಲ್ಲಿ ಪ್ರಗತಿ ಪರ ಮತ್ತು ಕನ್ನಡ ಪರ ಸಂಘಟನೆಗಳೊಂದಿಗೆ ರೈತ ಸಂಘದ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.
ಬೆಂಗಳೂರು-ಮೈಸೂರು ಹಳೇ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಬುಧವಾರ ವಿವಿಧ ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ಸೇರಿದ ರೈತ ಸಂಘದ ಕಾರ್ಯಕರ್ತರು ಕೆಲಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶಂಭುಗೌಡ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ತಮಿಳುನಾಡಿಗೆ ನೀರು ಬಿಡಲು ಆದೇಶಿಸಿರುವುದು ಸರಿಯಲ್ಲ. ಮೆಟ್ಟೂರು ಜಲಾಶಯದಲ್ಲಿ ಪ್ರಸ್ತುತ 80 ಟಿಎಂಸಿ ನೀರು ಸಂಗ್ರಹವಿದೆ. ಕೆ.ಆರ್.ಎಸ್ ಜಲಾಶಯದಿಂದ ಪುನಃ 6 ಸಾವಿರ ಕ್ಯೂಸೆಕ್‌ನಂತೆ 7.8 ಟಿಎಂಸಿ ನೀರು ಕೇಳುತ್ತಿರುವುದು ಸರಿಯಲ್ಲ. ಸರ್ಕಾರ ಮೊದಲು ರಾಜ್ಯದ ರೈತರ ಹಿತಕಾಯಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಮರಳಗಾಲ ಕೃಷ್ಣೇಗೌಡ ಮಾತನಾಡಿ, ರಾಜ್ಯ ಸರ್ಕಾರ ಸರಿಯಾಗಿ ಕಾನೂನು ಹೋರಾಟಕ್ಕೆ ಮುಂದಾಗಿಲ್ಲ. ತಮಿಳುನಾಡಿಗೆ ಯಾವ ಕಾರಣಕ್ಕೂ ನೀರು ಹರಿಸಬಾರದು ಎಂದರು.
ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕ್ಷೇತ್ರದ ಶಾಸಕರು ಕಾವೇರಿ ವಿಚಾರದಲ್ಲಿ ಮೌನವಹಿಸಿರುವುದು ನಾಚಿಕೆಗೇಡು ಎಂದರು.
ರೈತ ಮುಖಂಡರಾದ ಮೇಳಾಪುರ ಸ್ವಾಮಿಗೌಡ, ಕಡತನಾಳು ಬಾಲಕೃಷ್ಣ , ಪಾಂಡು, ದೊಡ್ಡಪಾಳ್ಯ ಜಯರಾಮು, ಡಿ.ಎಂ.ಕೃಷ್ಣೇಗೌಡ, ಡಿ.ಎಂ.ರವಿ, ನೀಲನಕೊಪ್ಪಲು ಶಶಿಕಾಂತ್, ಚಿಂದಗಿರಿಕೊಪ್ಪಲು ಸ್ವಾಮಿಗೌಡ, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಮಧುಗೌಡ, ರುಕ್ಮಾಂಗದ, ಫಿಲಿಪ್, ಗಂಜಾಂ ಹೊನ್ನಪ್ಪ, ಕೀರ್ತಿ, ಕುಬೇರಪ್ಪ ಭಾಗವಹಿಸಿದ್ದರು.