ಕಾವೇರಿ ಅಚ್ಚಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿಯ ಕಾರ್ಯಕರ್ತರು ಶ್ರೀರಂಗಪಟ್ಟಣದ ಬೆಂ-ಮೈ ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶನಿವಾರ ಕಬ್ಬಿನ ಜಲ್ಲೇ ಹಿಡಿದು ಪ್ರತಿಭಟಿಸಿದರು. ರೈತ ನಾಯಕ ಕೆ.ಎಸ್.ನಂಜುಂಡೇಗೌಡ, ರೈತ ಮುಖಂಡ ಬಿ.ಸಿ.ಕೃಷ್ಣೇಗೌಡ, ಉಂಡುವಾಡಿ ಮಹದೇವು ಇತರರು ಇದ್ದರು. 
ಮಂಡ್ಯ

ನಾಲೆಗಳಿಗೆ ನೀರು ಹರಿಸಲು ಆಗ್ರಹ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ
ಶ್ರೀರಂಗಪಟ್ಟಣ: ಕೆ.ಆರ್.ಎಸ್. ಅಣೆಕಟ್ಟೆಯಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ಬೆಳೆ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ತಕ್ಷಣ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶನಿವಾರ ಹಸಿರು ಧ್ವಜಗಳೊಂದಿಗೆ ಜಮಾವಣೆಗೊಂಡ ಹೋರಾಟಗಾರರು ಕೈಯಲ್ಲಿ ಒಣಗಿದ ಕಬ್ಬಿನ ಜಲ್ಲೇ ಹಿಡಿದು ಕೆಲಕಾಲ ಹೆದ್ದಾರಿಗೆ ಅಡ್ಡನಿಂತು ರಾಜ್ಯ ಸರ್ಕಾರ, ಜಲಸಂಪನ್ಮೂಲ ಸಚಿವ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರೈತರ ಜೀವನಾಡಿ ಕನ್ನಂಬಾಡಿ ಅಣೆಕಟ್ಟೆಯಲ್ಲಿ ಪ್ರಸ್ತುತ 80 ಅಡಿಗಳಷ್ಟು ನೀರಿನ ಸಂಗ್ರಹವಿದ್ದು, ಹಿಂದೆ ಇದಕ್ಕಿಂತಲೂ ಕಡಿಮೆ 72 ಅಡಿ ನೀರು ಸಂಗ್ರಹವಿದ್ದಾಗಲೇ ಬೆಂಗಳೂರಿಗರ ಕುಡಿಯುವ ನೀರಿನ ಪೂರೈಕೆ ಜತೆಗೆ ರೈತರ ಕೃಷಿ ಬೆಳೆಗಳ ಉಳಿವಿಗಾಗಿ ನಾಲೆಗಳಿಗೆ ನೀರು ನೀಡಿರುವ ಉದಾಹರಣೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 4ಲಕ್ಷ ಎಕರೆ ಭೂಮಿಯಲ್ಲಿ 2 ಸಾವಿರ ಕೋಟಿಗೂ ಅಧಿಕ ಮೌಲ್ಯದ ಕಬ್ಬು ಬೆಳೆ ಇದ್ದು, ತೋಟಗಾರಿಕೆ ಮತ್ತು ಇತರ ಬೆಳೆ ಸೇರಿದಲ್ಲಿ 4ರಿಂದ 5ಸಾವಿರ ಕೋಟಿ ರೂ. ಮೌಲ್ಯದ ಬೆಳೆಗಳನ್ನು ನೀರು ಕೊಟ್ಟು ಉಳಿಸಿಕೊಳ್ಳುವ ತವಕ ರೈತರಲ್ಲಿದ್ದು, ಈ ಜವಾಬ್ದಾರಿ ರಾಜ್ಯಸರ್ಕಾರ ಹೊರಬೇಕಿದೆ ಎಂದು ಆಗ್ರಹಿಸಿದರು.
ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕ್ಷೇತ್ರದ ಶಾಸಕರು ತಮಗೆ ಸಿಗುವ ಅನುದಾನ ಮತ್ತು ಸ್ಥಾನಮಾನಗಳ ಕಡೆ ಹೆಚ್ಚು ಗಮನಹರಿಸಿದ್ದಾರೆ ಹೊರತು ಬೆಳೆ ನಷ್ಟಕ್ಕೆ ಸಿಲುಕಿ ಕಂಗಾಲಾಗುವ ರೈತರ ಬಗೆಗಿನ ಕಾಳಜಿ ಯಾರೊಬ್ಬರಲ್ಲೂ ಇಲ್ಲ ಎಂದು ಕಿಡಿಕಾರಿದರು.
ಕುಡಿಯುವ ನೀರಿನ ನೆಪಹೇಳಿ ಕನ್ನಂಬಾಡಿ ಅಣೆಕಟ್ಟೆಯಲ್ಲಿನ ಕನಿಷ್ಠ ಸಂಗ್ರಹದ ನೀರನ್ನು ಈಗಾಗಲೇ ಮೈಸೂರು ನಗರಕ್ಕೆ ಪೂರೈಸುತ್ತಿದ್ದು, ಮುಂದೆ ಬೆಂಗಳೂರು ಮಹಾನಗರಕ್ಕೂ ವಿಸ್ತರಿಸುವ ಯೋಜನೆ ಹಾಕಿಕೊಂಡು ಅಣೆಕಟ್ಟೆ ಬರಿದಾಗಿಸುವ ಹುನ್ನಾರವನ್ನು ರಾಜ್ಯಸರ್ಕಾರವೇ ಮಾಡಿದೆ. ಕ್ಷೇತ್ರದ ರೈತರು ಹಾಗೂ ಬಡಜನರ ಸ್ಥಿತಿಗತಿ ಕಡೆಗಣಿಸಿರುವ ನಮ್ಮ ಜನಪ್ರತಿನಿಧಿಗಳು ಮೈಸೂರು ಮಹಾರಾಜರುಗಳಿಗಿಂತ ಇವರಲ್ಲೇ ರಾಜಪರಂಪರೆ ಆವರಿಸಿಕೊಂಡಿದ್ದು, ಮೈಸೂರು ನಗರ ಸೇರಿ ಅರಮನೆಯಂತಹ ಮನೆ ನಿರ್ಮಿಸಿಕೊಂಡು ವಿಲಾಸಿ ಜೀವನ ಕಂಡಿದ್ದಾರೆ ಎಂದು ದೂರಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಜಯರಾಮೇಗೌಡ, ಜಗದೀಶ್, ಪ್ರಧಾನ ಕಾರ್ಯದರ್ಶಿ ದರ್ಶನ್, ಖಜಾಂಚಿ ಉಂಡುವಾಡಿ ಮಹದೇವು, ಪದಾಧಿಕಾರಿಗಳಾದ ಮಹಾಲಿಂಗು, ಕಡತನಾಳು ಬಾಬು, ಅಚ್ಚಪ್ಪನಕೊಪ್ಪಲು ರವಿಲಕ್ಷ್ಮಣ, ಕೃಷ್ಣ, ನಾಗಯ್ಯನಹುಂಡಿ ಶಿವಣ್ಣ, ಹೊಸಳ್ಳಿ ಸ್ವಾಮಿ, ಹೆಮ್ಮಿಗೆ ಕೃಷ್ಣ, ಅಳುವಾಡಿ ನಾಗೇಂದ್ರ, ದರಸಗುಪ್ಪೆ ಸುರೇಶ್, ಪೈಲ್ವಾನ್ ನಾಗಣ್ಣ, ಪಾಲಹಳ್ಳಿ ರಾಮಚಂದ್ರು ಇತರರು ಈ ವೇಳೆ ಭಾಗಿಯಾಗಿದ್ದರು.